ADVERTISEMENT

ಗಜೇಂದ್ರಗಡ | ಹಾನಿಗೊಳಗಾದ ಸರ್ಕಾರಿ ಶಾಲೆಗೆ ಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:42 IST
Last Updated 13 ಆಗಸ್ಟ್ 2025, 7:42 IST
ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲಿಸಿದರು
ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲಿಸಿದರು   

ಗಜೇಂದ್ರಗಡ: ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಾನಿಗೊಳಗಾದ ಸಮೀಪದ ರಾಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರ್ತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ತಾಲ್ಲೂಕು ಪಂಚಾಯ್ತಿ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲಿಸಿದರು.‌

 ಮಳೆಯಿಂದ ಹಾನಿಗೊಳಗಾದ ಕಟ್ಟಡದ ಮೇಲ್ಛಾವಣಿ ಮತ್ತು ಒಳಾಂಗಣ ಗೋಡೆಗಳನ್ನು ಹಾಗೂ ಮಳೆಯಿಂದ ಸೋರುತ್ತಿರುವ ಕೊಠಡಿಗಳ ಛಾವಣಿಯನ್ನು ಪರಿಶೀಲಿಸಿದರು. ಹಾನಿಗೊಳಗಾದ ಕಟ್ಟಡದ ಗೋಡೆಗಳನ್ನು ತಾಲ್ಲೂಕು ಪಂಚಾಯ್ತಿ ಅನುದಾನದ ಅಡಿಯಲ್ಲಿ ಮುಂದಿನ ದಿನಗಳಲ್ಲಿ ದುರಸ್ತಿಗೊಳಿಸುವುದಾಗಿ ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಭರವಸೆ ನೀಡಿದರು.

ʼಶಾಲಾ ಕಟ್ಟಡದ ಒಳಗೆ ಮಳೆ ನೀರು ಬರುತ್ತಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಇದರಿಂದ ಶಾಲಾ ಸಮಯದಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕಟ್ಟಡ ದುರಸ್ತಿಗೊಳಿಸಿʼ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲೆಯ ಮುಖ್ಯಶಿಕ್ಷಕರು ಇಒ ಅವರಿಗೆ ಮನವಿ ಮಾಡಿದ್ದರು.

ADVERTISEMENT

ಗ್ರಾಮ ಪಂಚಾಯ್ತಿ ಸದಸ್ಯ ಬಾಲಾಜಿರಾವ್‌ ಬೋಸ್ಲೆ ʼಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡಿʼ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಇಒ ಮುಂದಿನ ಕ್ರಿಯಾ ಯೋಜನೆಯಲ್ಲಿ ಕಾಂಪೌಂಡ್‌ಗೆ ಬೇಕಾದ ಅನುದಾನ ಮೀಸಲಿಟ್ಟು ಕಾಮಗಾರಿ ಮಾಡಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.