ಮಹಾಲಿಂಗಪುರ: ಘಟಪ್ರಭಾ ನದಿಯಿಂದ ತಲೆದೋರಿರುವ ಪ್ರವಾಹ ಪರಿಸ್ಥಿತಿ ಶುಕ್ರವಾರ ಯಥಾಸ್ಥಿತಿಯಲ್ಲಿದ್ದು, ಸಮೀಪದ ಢವಳೇಶ್ವರ ಗ್ರಾಮದಿಂದ ಮಾರಾಪುರ, ಮುಧೋಳಕ್ಕೆ ತೆರಳುವ ಒಳರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಢವಳೇಶ್ವರ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ಲಕ್ಷ್ಮೀ ದೇವಿ, ದುರ್ಗಾದೇವಿ ದೇವಸ್ಥಾನಗಳು, ಅಂಗನವಾಡಿ ಕೇಂದ್ರ ನೀರಿನಿಂದ ಆವೃತವಾಗಿವೆ. ಹಳೇ ನಂದಗಾಂವ ಗ್ರಾಮ ನಡುಗಡ್ಡೆಯಾಗಿದೆ. ಒಟ್ಟು 49 ಕುಟುಂಬಗಳಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರವಾಗಿವೆ. ನೀರು ಹಿಂದಕ್ಕೆ ಸರಿಯಬಹುದೆಂಬ ನಿರೀಕ್ಷೆಯಿಂದ ಕೆಲ ಕುಟುಂಬಗಳು ಅಲ್ಲೇ ಉಳಿದುಕೊಂಡಿವೆ.
ಗೋಕಾಕ ಹತ್ತಿರದ ದುಪದಾಳ ಜಲಾಶಯ ಮಾರ್ಗವಾಗಿ 35,415 ಕ್ಯುಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದೆ. ಬಳ್ಳಾರಿ ನಾಲಾ 1,881 ಕ್ಯುಸೆಕ್, ಮಾರ್ಕಂಡೇಯ ಜಲಾಶಯದಿಂದ 4,021 ಕ್ಯುಸೆಕ್ ನೀರು ಸೇರಿದಂತೆ ಘಟಪ್ರಭಾ ನದಿಗೆ ಒಟ್ಟು 41,317 ಕ್ಯುಸೆಕ್ ನೀರು ಹರಿದುಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.