ಮಹಾಲಿಂಗಪುರ: ಮಳೆ ಆರ್ಭಟ ಕಡಿಮೆಯಾದರೂ ಘಟಪ್ರಭಾ ನದಿ ನೀರಿನ ಒಳಹರಿವು ಗುರುವಾರ ತುಸು ಹೆಚ್ಚಳವಾಗಿದ್ದು, ಪ್ರವಾಹ ಭಾದಿತ ಸಮೀಪದ ಢವಳೇಶ್ವರ ಹಾಗೂ ನಂದಗಾಂವ ಗ್ರಾಮದ ನದಿ ಪಾತ್ರದ ಜನರಿಗೆ ಮತ್ತೆ ಆತಂಕ ಶುರುವಾಗಿದೆ.
ಗುರುವಾರ ಮಧ್ಯಾಹ್ನದ ಮಾಹಿತಿ ಪ್ರಕಾರ ಹಿಡಕಲ್ ಜಲಾಶಯ ಮತ್ತು ಹಿರಣ್ಯಕೇಶಿ ನದಿ ಎರಡು ಸೇರಿ ಧುಪದಾಳ ಜಲಾಶಯ ಮಾರ್ಗವಾಗಿ 55,415 ಕ್ಯುಸೆಕ್, ಮಾರ್ಕಂಡೇಯ ಜಲಾಶಯದಿಂದ 4,410 ಹಾಗೂ ಬಳ್ಳಾರಿ ನಾಲಾದಿಂದ 2,174 ಕ್ಯುಸೆಕ್ ಸೇರಿ ಒಟ್ಟು 61,999 ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಬುಧವಾರ ಕಡಿಮೆಯಾಗಿದ್ದ ನೀರಿನ ಒಳಹರಿವು ಏಕಾಏಕಿ ಏರಿಕೆಯಾಗಿದೆ.
ಢವಳೇಶ್ವರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಜಲಾವೃತಗೊಂಡಿದೆ. ಏಳು ಸಾಮೂಹಿಕ ಶೌಚಾಲಯಗಳು ನೀರಿನಲ್ಲಿ ನಿಂತಿವೆ. ಬುಧವಾರ ಪ್ರವಾಹ ಕಡಿಮೆಯಾಗಿದ್ದರಿಂದ ಜಲಾವೃತಗೊಂಡಿದ್ದ ಕೆಲ ಮನೆಗಳು ಮುಕ್ತಗೊಂಡಿದ್ದವು. ಇದರಿಂದ ನಿರಾಳರಾಗಿದ್ದ ಜನರು ತಮ್ಮ ಮನೆಗಳನ್ನು ನೀರಿನಿಂದ ತೊಳೆಯಲು ಮುಂದಾಗಿದ್ದರು. ಆದರೆ, ಗುರುವಾರ ಪ್ರವಾಹದಲ್ಲಿ ತುಸು ಏರಿಕೆ ಕಂಡಿದ್ದು, ಮನೆಗಳು ಮತ್ತೆ ಜಲಾವೃತಗೊಳ್ಳಲಿವೆ.
ನಾಲ್ಕೈದು ದಿನದಿಂದ ರಜೆ ನೀಡಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತರಗತಿಯನ್ನು ಗುರುವಾರದಿಂದ ಆರಂಭಿಸಲಾಗಿದೆ. ಪ್ರವಾಹ ಭಾದಿತ ಹಳೇ ನಂದಗಾಂವ ಗ್ರಾಮ ನಡುಗಡ್ಡೆಯಾಗಿ ಮುಂದುವರೆದಿದೆ. ಮೂರು ದಿನದಿಂದ ರಜೆ ಘೋಷಿಸಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುವಾರ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.