ಬಾಗಲಕೋಟೆ: ಜಿಲ್ಲೆಯ ಉತ್ತೂರು, ಶಿರೋಳ, ಹನಗಂಡಿ ಸೇರಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹ 1 ಸಾವಿರದಿಂದ ₹ 2 ಸಾವಿರವರೆಗೆ ‘ಠೇವಣಿ’ ಇಡುವ ಯೋಜನೆ ಜಾರಿಗೊಳಿಸಲಾಗಿದೆ.
ಉತ್ತೂರು: 108 ವರ್ಷದ ಉತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 175 ವಿದ್ಯಾರ್ಥಿಗಳು ಇದ್ದಾರೆ. ತಾವು ಓದಿರುವ ಶಾಲೆಗೆ ಈಚೆಗೆ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ‘ಒಂದನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ₹2 ಸಾವಿರ ಠೇವಣಿ ಇಡಲಾಗುವುದು’ ಎಂದು ಘೋಷಿಸಿದರು.
‘ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಯುಬಿ ಕಂಪನಿಯು ಉತ್ತೂರು ಶಾಲೆಗೆ ₹5 ಕೋಟಿ ವೆಚ್ಚದಲ್ಲಿ 20 ಕೊಠಡಿಗಳನ್ನು ನಿರ್ಮಿಸಲಿದೆ. ಸಚಿವ ತಿಮ್ಮಾಪುರ ಅವರು ಆಸಕ್ತಿ ತೋರಿದ್ದಾರೆ. ಸದ್ಯ 8 ಮಕ್ಕಳು ಪ್ರವೇಶ ಪಡೆದಿದ್ದು, ಪ್ರಕ್ರಿಯೆ ಮುಂದುವರಿದಿದೆ’ ಎಂದು ಉತ್ತೂರು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಅಶೋಕ ಬಾಗೋಜಿ ತಿಳಿಸಿದರು.
ಶಿರೋಳ: 150 ವರ್ಷದ ಶಿರೋಳದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 500 ರಿಂದ 205ಕ್ಕೆ ಇಳಿಮುಖವಾಗಿದೆ. ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಮೊದಲನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1 ಸಾವಿರ ಠೇವಣಿ ಇಡಲು ನಿರ್ಧರಿಸಿದೆ.
‘ಶಿರೋಳದ ಶಾಲೆಯಲ್ಲಿ ಮೊದಲನೇ ತರಗತಿಗೆ ದಾಖಲಾದ 7 ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗಿದೆ. ಠೇವಣಿ ಜೊತೆಗೆ ಎರಡು ಸ್ಟಾರ್ಟ್ ಕ್ಲಾಸ್, ಗ್ರಂಥಾಲಯ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ’ ಎಂದು ಶಿರೋಳ ಶಾಲೆಯ ಮುಖ್ಯ ಶಿಕ್ಷಕ ರಾಮನಗೌಡ ಪಾಟೀಲ ತಿಳಿಸಿದರು.
ಇದೇ ರೀತಿ ಹನಗಂಡಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ಎಲ್. ಪತ್ತಾರ, ಅಲಗೂರ್ ತೋಟದ ಶಾಲೆಯ ಶಿಕ್ಷಕ ಬಿ.ಎಸ್. ಅರವತ್ತಿ ಮತ್ತು ಲಿಂಗನೂರ ಶಾಲೆ ಎಸ್‌ಡಿಎಂಸಿ ಸದಸ್ಯರು ಠೇವಣಿ ಇಡಲು ನಿರ್ಧರಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿವೆ. ಮಕ್ಕಳನ್ನು ಪ್ರೋತ್ಸಾಹಿಲು ಠೇವಣಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಸದ್ಬಳಕೆ ಆಗಬೇಕು.ಆರ್.ಬಿ. ತಿಮ್ಮಾಪುರ ಸಚಿವ ಅಬಕಾರಿ ಖಾತೆ
ಸರ್ಕಾರಿ ಶಾಲೆಗೆ ಸೇರುವ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಶಿಕ್ಷಕರೇ ಠೇವಣಿ ಯೋಜನೆ ಆರಂಭಿಸಿದ್ದಾರೆ. ಉತ್ತಮ ಕಾರ್ಯ.ಎ.ಕೆ. ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿ ಜಮಖಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.