ADVERTISEMENT

ಐಟಿ ಪಾವತಿಸುವವರು ಗ್ಯಾರಂಟಿಗೆ ಅರ್ಹರಲ್ಲ: ಪ್ಯಾಟಿಮಠ

ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ: ಪ್ಯಾಟಿಮಠ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:06 IST
Last Updated 29 ಜನವರಿ 2026, 7:06 IST
ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಅಣವೀರಯ್ಯ ಪ್ಯಾಟಿಮಠ ಉದ್ಘಾಟಿಸಿದರು
ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಅಣವೀರಯ್ಯ ಪ್ಯಾಟಿಮಠ ಉದ್ಘಾಟಿಸಿದರು   

ಬೀಳಗಿ: ‘ರಾಜ್ಯದಲ್ಲಿ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸುವವರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ. ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಗಮನ ಹರಿಸುತ್ತಾರೆ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.

ತಾಲ್ಲೂಕಿನ ಅನಗವಾಡಿ, ಹೆರಕಲ್ಲ ಹಾಗೂ ಬೂದಿಹಾಳ ಎಸ್.ಎಚ್ ಗ್ರಾಮದಲ್ಲಿ ತಾಲ್ಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

‘ಯೋಜನೆಗಳು ರಾಜ್ಯದ ಜನಸಾಮಾನ್ಯರ ಬದುಕಿನಲ್ಲಿ ಸುಧಾರಣೆ ತಂದಿರುವುದಲ್ಲದೇ, ಆರ್ಥಿಕ ಸಬಲತೆಗೆ ಒತ್ತು ನೀಡಿವೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳಿಂದ ಉಳಿತಾಯವಾಗುತ್ತಿರುವ ಹಣದಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ನೆಮ್ಮದಿಯ ಬದುಕಿಗೆ ಗ್ಯಾರಂಟಿ ಆಸರೆಯಾಗಿವೆ’ ಎಂದು ತಿಳಿಸಿದರು.

ADVERTISEMENT

ಗ್ಯಾರಂಟಿ ನಿರ್ದೇಶಕ ವೆಂಕನಗೌಡ ಪಾಟೀಲ, ರಸೂಲಸಾಬ ಮುಜಾವಾರ, ಚಂದ್ರಶೇಖರ ಪಂಡರಿ ಮಾತನಾಡಿದರು.

ಬೀಳಗಿಯಿಂದ ಅನಗವಾಡಿ, ತುಂಬರಮಟ್ಟಿ ಮಾರ್ಗವಾಗಿ ಹೆರಕಲ್ಲ ಗ್ರಾಮಕ್ಕೆ ಬೆಳಿಗ್ಗೆ 9 ಗಂಟೆಗೆ, ಸಂಜೆ 4 ಗಂಟೆಗೆ ಒಂದು ಬಸ್ ಬಿಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗೆ ಹೆರಕಲ್ಲ ಗ್ರಾಮಸ್ಥರು ಮನವಿ ನೀಡಿದರು. ಮನವಿಗೆ ಸ್ಪಂದಿಸಿದ ಅಧಿಕಾರಿ ಮಾಹಾಂತೇಶ ಬಿರಾದಾರ ಈ ವಿಷಯದ ಕುರಿತು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಮೇಲ್ವಿಚಾರಕಿ ಸುರೇಖಾ ಹಂಚಿನಾಳ, ಹೆಸ್ಕಾಂ ಇಲಾಖೆಯ ಮಂಜುನಾಥ ಬೊಕಿ, ಆಹಾರ ಇಲಾಖೆಯ ಎ.ಎಲ್.ಸನದಿ, ಭಜಂತ್ರಿ, ಗ್ಯಾರಂಟಿ ನಿರ್ದೇಶಕರಾದ ನಾರಾಯಣ ಕಂಬಾರ, ಮುತ್ತು ಲಮಾಣಿ, ಸದಾಶಿವ ಜುಂಜೂರಿ, ರೇಖಾ ಕಟ್ಟೆಪ್ಪನವರ, ಗ್ರಾಮದ ಪ್ರಮುಖರಾದ ಟಿ.ವೈ.ಜಾನಮಟ್ಟಿ, ಬಿರಪ್ಪ ಪೂಜೇರಿ, ಪಾಂಡುರಂಗ ಹಾದಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.