ಗುಳೇದಗುಡ್ಡ: ತಾಲ್ಲೂಕಿನ ಹುಲ್ಲಿಕೇರಿ ಎಸ್.ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲ್ಲೂಕಿನಲ್ಲಿಯೇ ಮಾದರಿ ಶಾಲೆ ಎನಿಸಿದೆ.
1939 ರಲ್ಲಿ 12 ಗುಂಟೆ ಜಾಗದಲ್ಲಿ ಶಾಲೆ ಆರಂಭವಾಗಿದೆ. ಪ್ರಸ್ತುತ ಶಾಲೆಗೆ ಹೊಂದಿಕೊಂಡಿರುವ 12 ಗುಂಟೆ ಜಾಗವನ್ನು ಗ್ರಾಮದ ಫಕೀರಪ್ಪ ಹಡಪದ ದಾನ ಮಾಡಿದ್ದಾರೆ. ಈಗ ಶಾಲೆ ವಿಶಾಲವಾದ ಜಾಗ ಸಿಕ್ಕಂತಾಗಿದೆ.
ಒಟ್ಟು 408 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಂಟನೇ ತರಗತಿಯವರೆಗೆ ಓದುತ್ತಿದ್ದಾರೆ. ತಾಲ್ಲೂಕಿನಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯಾಗಿದೆ. ಇಲ್ಲಿ ಮಂಜೂರಾದ 14 ಶಿಕ್ಷಕರ ಹುದ್ದೆಗಳಲ್ಲಿ 11 ಜನ ಪೂರ್ಣಕಾಲಿಕ ಶಿಕ್ಷಕರಿದ್ದಾರೆ. ಅದರಲ್ಲಿ ಇಬ್ಬರು ಶಿಕ್ಷಕರಿಗೆ ತಾತ್ಕಾಲಿಕವಾಗಿ ಡೆಪುಟೇಶನ್ ಆಧಾರದಲ್ಲಿ ವರ್ಗಾವಣೆ ಮಾಡಿದೆ. ಹಿರಿಯ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದೆ.
ಪ್ರಭಾರ ಮುಖ್ಯ ಶಿಕ್ಷಕರವಿಚಂದ್ರ ಬೇನಾಳ ಅವರು ಸಾರ್ವಜನಿಕರು, ಗ್ರಾಮ ಪಂಚಾಯತಿಯ ಸದಸ್ಯರು, ಅಧ್ಯಕ್ಷರು, ಎಸ್‌ಡಿಎಂಸಿ ಸದಸ್ಯರು ಮತ್ತು ಅಧ್ಯಕ್ಷರು ಹಾಗೂ ಹಳೆವಿದ್ಯಾರ್ಥಿಗಳ ಸಂಘ ರಚಿಸುವ ಮೂಲಕ ಅವರ ಪ್ರೊತ್ಸಾಹ ಪಡೆದು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಶಾಲಾ ಅಭಿವೃದ್ಧಿ ಗಮನಿಸಿ ಸರ್ಕಾರ 2023-24ನೇ ಸಾಲಿನಿಂದ ಕೇಂದ್ರದ ಅನುದಾನ ಪ್ರಾಯೋಜಿತವಾದ ಪಿಎಂಶ್ರೀ ಶಾಲೆಯಾಗಿ ಪರಿವರ್ತಿತವಾಗಿದೆ.
2024-25ನೇ ಸಾಲಿನಿಂದ ತಾಲ್ಲೂಕಿನಲ್ಲಿಯೇ ಪ್ರಥಮವಾಗಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಿದೆ. ಎಲ್‍ಕೆಜಿಯಲ್ಲಿ 26 ಮತ್ತು ಯುಕೆಜಿಯಲ್ಲಿ 34 ವಿದ್ಯಾರ್ಥಿಗಳಿದ್ದಾರೆ. ಒಟ್ಟು10 ತರಗತಿ ಕೊಠಡಿಗಳಿವೆ ಇದರಲ್ಲಿ ಕಂಪೂಟರ್ ಕೊಠಡಿ ವರ್ಗ ತರಗತಿ, ಮತ್ತು ಕಚೇರಿ ಮಾಡಿಕೊಂಡಿದ್ದಾರೆ. ಹೆಚ್ಚುವರಿ ತರಗತಿಯನ್ನು ಪರಿಸರದಲ್ಲಿ ಪಾಠ ಮಾಡಲಾಗುತ್ತಿದೆ.
ಕುಡಿಯುವ ನೀರು ಮತ್ತು ಶೌಚಾಲಯ: ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೊಂದರಂತೆ 2 ಶೌಚಾಯಗಳಿವೆ. ಹೆಚ್ಚಿನ ವಿದ್ಯಾರ್ಥಿಗಳಿರುವುದರಿಂದ ಇನ್ನೆರಡು ಶೌಚಾಲಯ ಕಟ್ಟಡದ ಅವಶ್ಯಕತೆ ಇದೆ. ನಿರಂತರ ಕುಡಿಯುವ ನೀರಿನ ಯೋಜನೆಯಲ್ಲಿ ಶಾಲೆಗೆ ನೀರು ಸರಬರಾಜು ಆಗುವುದರಿಂದ ನೀರಿನ ತೊಂದರೆ ಇಲ್ಲ.
ಉತ್ತಮ ಆಟದ ಮೈದಾನ: 10 ಗುಂಟೆಯಷ್ಟು ಉತ್ತಮ ಆಟದ ಮೈದಾನವಿದೆ. ಇದನ್ನು ಗ್ರಾಮಸ್ಥರು ಸ್ವಂತ ಹಣದಲ್ಲಿ ಸಮತಟ್ಟಾಗಿ ಮಾಡಿದ್ದಾರೆ. ಆಟದ ಪರಿಕರ ಒದಗಿಸಿದ್ದಾರೆ.
ಮೂಲ ಸೌಲಭ್ಯ ಒದಗಿಸಿದವರು: ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರು ₹1 ಲಕ್ಷ ವೆಚ್ಚದಲ್ಲಿ 4 ಕಂಪೂಟರ್ ನೀಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಒದಗಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ₹50 ಸಾವಿರ ವೆಚ್ಚದಲ್ಲಿ ಎಚ್.ಡಿ.ಪ್ರೊಜೆಕ್ಚರ್ ಒದಗಿಸಿದ್ದಾರೆ. ಎಸ್‌ಡಿಎಂಸಿ ಸದಸ್ಯರು 3 ಟಿವಿ ಮತ್ತು 2 ಅಲಮಾರು ನೀಡಿದ್ದಾರೆ.
ಎಲ್‍ಕೆಜಿ ಮತ್ತು ಯುಕೆಜಿ ಆರಂಭವಾಗಿರುವುದರಿಂದ ಗ್ರಾಮಸ್ಥರೇ ಉದ್ಯಾನವನ ನಿರ್ಮಿಸಿ ಮಕ್ಕಳಿಗೆ ಜಾರುಬಂಡೆ ಇತರೆ 50 ಸಾವಿರಕ್ಕೂ ಹೆಚ್ಚು ಮೊತ್ತದ ಆಟದ ಪರಿಕರ ಅಳವಡಿಸಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿ ನೀಲಪ್ಪ ನರಲಾರ ಪೊಲೀಸ್ ಸಬ್ ಇನ್‌ಸ್ಪೆಕ್ಟ್‌ರ್ ಆಗಿ ಆಯ್ಕೆಯಾಗಿದ್ದು ಎರಡು ವರ್ಷಗಳಿಂದ ಪ್ರತಿ ವರ್ಷ ₹10 ಸಾವಿರ ನೀಡುತ್ತಾ ಬಂದಿದ್ದು ನಿವೃತ್ತಿಯವರೆಗೂ ನೀಡುವುದಾಗಿ ಘೋಷಿಸಿದ್ದಾರೆ. ಹೀಗೆ ಸಾರ್ವಜನಿಕರ ಸಹಕಾರದಿಂದ ಸಮಾರಂಭದ ವೇದಿಕೆ ನಿರ್ಮಾಣ ಮಾಡಿ ಮೂಲ ಸೌಕರ್ಯ ಹೊಂದಿದೆ.
ಅದ್ದೂರಿ ಚಿಣ್ಣರ ಉತ್ತವ: ಪ್ರತಿ ವರ್ಷ ಶಾಲಾ ಶೈಕ್ಷಣಿಕ ವರ್ಷದ ಕೊನೆಗೆ ಚಿಣ್ಣರ ಉತ್ಸವ ಮಾಡುತ್ತಿದ್ದು, ₹1.5 ಲಕ್ಷ ವೆಚ್ಚಮಾಡುತ್ತಿದ್ದು ಗ್ರಾಮಸ್ಥರೇ ಭರಿಸುವುದು ವಿಶೇಷವಾಗಿದೆ.
ಪ್ರಸ್ತುತ ಶಾಲಾ ಕಂಪೌಂಡ್ ಅನ್ನು ನರೇಗಾ ಮತ್ತು ಸರ್ಕರದ ಇತರೆ ಯೋಜನೆಯಲ್ಲಿ ಗ್ರಾಮ ಪಂಚಾಯಯಿತಿ ಅಧ್ಯಕ್ಷ ಆನಂದ ರಾಠೋಡ ಅವರ ತಂಡ ಮಾಡುತ್ತಿದೆ. ಇಷ್ಟೆಲ್ಲಾ ಅಭಿವೃದ್ಧಿಯಾಗಲು ಸಾರ್ವಜನಿಕರ ಸಹಕಾರ ಕಾರಣವಾಗಿದೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಾರೆ.
ಹಳೆವಿದ್ಯಾರ್ಥಿಗಳ ಸಂಘ ರಚನೆ ಮಾಡಿದ ಮೊದಲ ಶಾಲೆ 10 ಗುಂಟೆಯಷ್ಟು ಉತ್ತಮ ಆಟದ ಮೈದಾನ ಶಾಲೆ ಪ್ರತಿವರ್ಷ ಹತ್ತು ಸಾವಿರ ನೀಡುವ ಹಳೆಯ ವಿದ್ಯಾರ್ಥಿ
ಇದ್ದ ಸಂಪನ್ಮೂಲ ಬಳಸಿ ಸಾರ್ವಜನಿಕ ಸಹಭಾಗಿತ್ವ ಪಡೆದು ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಂದಲೇ ಪಡೆದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದರಿಂದ ಪಾಲಕರು ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಾರೆ ರವಿಚಂದ್ರ ಬೇನಾಳಪ್ರಭಾರ ಮುಖ್ಯ ಶಿಕ್ಷಕ ಗುಳೇದಗುಡ್ಡ ತಾಲ್ಲೂಕಿನಲ್ಲಿಯೇ ಉತ್ತಮ ಸೌಲಭ್ಯ ಹೊಂದಿರುವ ಸರ್ಕಾರಿ ಶಾಲೆ ಇದು. ಇಲ್ಲಿ ಉತ್ತಮ ಶಿಕ್ಷಕರಿದ್ದು ನಾವು ಮತ್ತು ಡಯಟ್ ಪ್ರಾಚಾರ್ಯರು ಮೇಲಿಂದ ಮೇಲೆ ಭೇಟಿ ನೀಡಿ ಸರ್ಕಾರ ಸೌಲಭ್ಯ ಇತರೆ ಅನುಕೂಲತೆಗಳನ್ನು ಒದಗಿಸುವಲ್ಲಿ ಬದ್ಧರಾಗಿದ್ದೇವೆ ಕೇಶವ ಪೆಟ್ಲೂರಕ್ಷೇತ್ರ ಶಿಕ್ಷಣಾಧಿಕಾರಿ ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.