
ಇಂದಿರಾಗಾಂಧಿ ವಸತಿ ಶಾಲೆ ರಸ್ತೆ
ಗುಳೇದಗುಡ್ಡ: ತಾಲ್ಲೂಕಿನ ತೂಗುಣಸಿ ಕ್ರಾಸ್ ಸಮೀಪದ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗಲು ಉತ್ತಮ ರಸ್ತೆ ಇಲ್ಲದ್ದರಿಂದ ಅಲ್ಲಿನ ಸಿಬ್ಬಂದಿ ಮತ್ತು ಮಕ್ಕಳು ಹೋಗಿ ಬರಲು ತೀವ್ರ ತೊಂದರೆಯಾಗಿದೆ.
ಗುಳೇದಗುಡ್ಡ ಪಟ್ಟಣದ ಬಾಡಿಗೆ ಕಟ್ಟಡದಲ್ಲಿದ್ದ ಇಂದಿರಾಗಾಂಧಿ ಶಾಲೆ 2025ರ ಮಾರ್ಚ್ ತಿಂಗಳಲ್ಲಿ ಸ್ವಂತ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ಅಲ್ಲಿ ಉತ್ತಮ ಕಟ್ಟಡವಿದ್ದು ಎಲ್ಲ ಮೂಲಸೌಲಭ್ಯ ಮತ್ತು ಕಾಂಪೌಂಡ್ ಹೊಂದಿದೆ. ಆದರೆ ಶಾಲೆಗೆ ಸಂಪರ್ಕಿಸುವ ರಸ್ತೆಯದ್ದೇ ಸಮಸ್ಯೆ ಆಗಿದೆ.
ಶಾಲೆಯಲ್ಲಿ ಸಂಪೂರ್ಣ ಸಿಬ್ಬಂದಿ ಬಲವಿದ್ದು, 6ರಿಂದ 10ನೇ ತರಗತಿ ವರೆಗೆ ಒಟ್ಟು 250 ವಿದ್ಯಾರ್ಥಿ
ಗಳು ಓದುತ್ತಿದ್ದಾರೆ. 9 ಎಕರೆಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ತಾತ್ಕಾಲಿಕವಾಗಿ ಖಾಸಗಿ ಹೊಲದ ಪಕ್ಕ ಓಡಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಶಾಲೆಯ ಮುಖ್ಯ ದ್ವಾರದ ಬಳಿ 25 ಅಡಿಯಷ್ಟು ಉದ್ದಕ್ಕೆ ಕೋಟೆಕಲ್ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ರಸ್ತೆ ಹಾದು ಹೋಗಿದೆ. ಇಲ್ಲಿ ಓಡಾಡುವುದಕ್ಕೆ ಹಲವು ಬಾರಿ ರೈತ ಆಕ್ಷೇಪ ವ್ಯಕ್ತಪಡಿಸಿದ್ದೂ ಇದೆ.
‘ತನಗೆ ಅಥವಾ ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಿದರೆ ಇಲ್ಲಿ ನಿಮಗೆ ಓಡಾಡಲು ಅನುಮತಿ ನೀಡುತ್ತೇನೆ. ಇಲ್ಲದಿದ್ದರೆ ಈ ಮಾರ್ಗದ ಮೂಲಕ ಸಂಚರಿಸಲು ಬಿಡುವುದಿಲ್ಲ ಎಂದು ರೈತ ಆಗಾಗ್ಗೆ ಪಟ್ಟು ಹಿಡಿಯುತ್ತಾರೆ’ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಮಳೆಗಾಲದಲ್ಲಿ ತೀವ್ರ ತೊಂದರೆ: ಮಳೆಗಾಲ ಆರಂಭವಾದರೆ ರಸ್ತೆಯು ನೀರಿನಿಂದ ತುಂಬಿರುತ್ತದೆ. ಅದರಲ್ಲಿಯೇ ಓಡಾಡುವುದು ಅನಿವಾರ್ಯವಾಗಿದೆ. ಆಗ ಬಟ್ಟೆ ಕೊಳೆ ಆಗುತ್ತದೆ ಎಂಬುದು ವಿದ್ಯಾರ್ಥಿಗಳ ಅಳಲು.
‘ಶಾಲೆಗೆ ಹೋಗಲು ಜಮೀನಿನ ಪಕ್ಕದಲ್ಲಿ ಸರ್ಕಾರಿ ಭೂಮಿಯಲ್ಲಿ ರಸ್ತೆ ಇಲ್ಲದಿರುವುದು ತೀವ್ರ ತೊಂದರೆಯಾಗಿದೆ. ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಿ ಸರ್ಕಾರ ನಮಗೆ ರಸ್ತೆ ನಿರ್ಮಿಸಿಕೊಡಬೇಕು’ ಎಂದು ಶಾಲೆಯ ಪ್ರಾಚಾರ್ಯರಾದ ಆರ್.ಜೆ. ಪವಾರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.