ADVERTISEMENT

ಗುಳೇದಗುಡ್ಡ: ಹಲವು ಬೆಳೆ, ಉತ್ತಮ ಆದಾಯ– ಸಾವಯವ ಮಿಶ್ರ ಬೇಸಾಯದ ಕೃಷಿಕ ಕಮತರ

ಸಾವಯವ ಮಿಶ್ರ ಬೇಸಾಯದ ಕೃಷಿಕ ಮಾಗುಂಡಪ್ಪ ಕಮತರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 7:19 IST
Last Updated 12 ಜುಲೈ 2024, 7:19 IST
ಕೃಷಿ ಬೆಳೆಗಳೊಂದಿಗೆ ರೈತ ಮಾಗುಂಡಪ್ಪ ಕಮತರ 
ಕೃಷಿ ಬೆಳೆಗಳೊಂದಿಗೆ ರೈತ ಮಾಗುಂಡಪ್ಪ ಕಮತರ    

ಗುಳೇದಗುಡ್ಡ: ಗುಡ್ಡಕ್ಕೆ ಹೊಂದಿಕೊಂಡ ಒಂದೂವರೆ ಎಕರೆ ಜಮೀನಿನಲ್ಲಿ ತಾಲ್ಲೂಕಿನ ಕೋಟೆಕಲ್ ಗ್ರಾಮದ ಪ್ರಗತಿಪರ ರೈತ ಮಾಗುಂಡಪ್ಪ ಕಮತರ ಸಾವಯವ ಸಮಗ್ರ ಕೃಷಿ ಮಾಡಿ ಸಾಧನೆ ಮಾಡಿದ್ದಾರೆ.

ಮಾಗುಂಡಪ್ಪ ಪಿಯುಸಿವರೆಗೆ ಓದಿ ತಂದೆಯಿಂದ ಬಂದ ಜಮೀನಿನಲ್ಲಿ ಚಿಕ್ಕವರಿರುವಾಗಲೇ ಕೃಷಿಯತ್ತ ಮುಖ ಮಾಡಿದರು. ಮಳೆಯಿಂದ ಹರಿದು ಹೋಗುವ ನೀರನ್ನು ಇಂಗಿಸಿ ಭೂಮಿ ತಂಪಾಗಿರುವಂತೆ ಮಾಡಿದ್ದಾರೆ. ಕೃಷಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಕೆಲಸ ಮಾಡುತ್ತಿದ್ದಾರೆ.

ಜಮೀನಿನಲ್ಲಿ ಹೀರೇಕಾಯಿ, ಸೌತೆ, ಬದನೆ, ಚೆಂಡು ಹೂ, ಪೇರಲ, ಮಾವು, ನುಗ್ಗೆ, ಮೆಣಸು, ಭತ್ತ, ಜೋಳ ಮುಂತಾದ ಮಿಶ್ರ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಬರುವಂತೆ ಮಾಡಿದ್ದಾರೆ. ತೋಟಗಾರಿಕೆ ಬೆಳೆಯಾಗಿ ಲಿಂಬೆ, ಚಿಕ್ಕು, ಮಾವು, ಸಪೋಟಾ, ಸೀಬೆ, ನುಗ್ಗೆ, ಕರಿಬೇವು ಜೊತೆಗೆ ಹೊಲದ ಬದುವಿನಲ್ಲಿ ತೆಂಗು, ತೇಗ, ಹುಣಸೆ, ಬೇವಿನ ಮರಗಳನ್ನು ಬೆಳೆಯುತ್ತಿದ್ದಾರೆ.

ADVERTISEMENT

ಸಾವಯವ ಗೊಬ್ಬರ: ಮಣ್ಣಿನ ಫಲವತ್ತತೆಗಾಗಿ ಸ್ವಂತ ಎರೆಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕೋಳಿ, ಕುರಿ, ಮೇಕೆ ಗೊಬ್ಬರ ಬಳಸುತ್ತಾರೆ. ಎಮ್ಮೆ ಆಕಳುಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ.

ಸೈಕಲ್ ಗಾಲಿ ಮೂಲಕ ಕೃಷಿ: ಗುಡ್ಡಕ್ಕೆ ಹೊಂದಿಕೊಂಡಂತೆ ಜಮೀನು ಇರುವುದರಿಂದ ಟ್ರ್ಯಾಕ್ಟರ್‌ ಹೋಗಲು ರಸ್ತೆ ಇಲ್ಲ. ಹೀಗಾಗಿ ಕಸ ತೆಗೆಯಲು, ಎಡೆ ಹೊಡೆಯಲು ಮುಂತಾದ ಕೃಷಿ ಕಾರ್ಯಗಳಿಗೆ ಸೈಕಲ್‍ ಅನ್ನು ಬಳಸುತ್ತಾರೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಸೈಕಲ್ ಕೃಷಿ ಪರಿಕರವಾಗಿದೆ.

ಹೊಂಡದ ನೀರು ಬಳಕೆ: ಹಿರೇಹಳ್ಳದ ದಿಡಿಗಿನ ನೀರು ಇವರ ಹೊಲಕ್ಕೆ ಹೊಂದಿಕೊಂಡಂತೆ ಹರಿದು ಹೋಗುವುದರಿಂದ ಅದರ ನೀರನ್ನು ಸವರ ಹೊಂಡ ತುಂಬಿಸಿಕೊಂಡು ನಂತರ ಹೊಂಡದಲ್ಲಿರುವ ನೀರನ್ನು ಕೃಷಿಗೆ ಬಳಸುತ್ತಿದ್ದಾರೆ. ವಿದ್ಯುಚ್ಛಕ್ತಿ ಇಲ್ಲದೇ ಡೀಸಲ್‌ ಪಂಪ್‌ ಮೂಲಕ ತಮ್ಮ ಜಮೀನಿನ ಬೆಳೆಗಳಿಗೆ ನೀರು ಹಾಯಿಸುತ್ತಾರೆ.

ಹುಳು ನಿಯಂತ್ರಣ: ಗುಡ್ಡಕ್ಕೆ ಹೊಂದಿಕೊಂಡಿರುವುದರಿಂದ ಹುಳುಗಳ ಕಾಟ ಹೆಚ್ಚಾಗಿದೆ. ಹುಳುಗಳ ನಿಯಂತ್ರಣಕ್ಕೆ ಸೋಲಾರ್‌ ಟ್ರ್ಯಾಪ್ ಬಳಸುತ್ತಿದ್ದಾರೆ.

ಕೃಷಿ ಬೆಳೆಗಳೊಂದಿಗೆ ರೈತ ಮಾಗುಂಡಪ್ಪ ಕಮತರ 

ಹಲವು ಪುರಸ್ಕಾರಗಳು

2005 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಸಮಗ್ರ ಕೃಷಿಕ ಪ್ರಶಸ್ತಿ 2015 ರಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ಬಂಗಾರದ ಮನುಷ್ಯ ಪ್ರಶಸ್ತಿ 2015 ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿಯಿಂದ ಉತ್ತಮ ಕೃಷಿಕ ಪ್ರಶಸ್ತಿ 2017ರಲ್ಲಿ ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಶಸ್ತಿ 2019 ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.