ADVERTISEMENT

ಶರಣರ ತತ್ವಗಳ ಪಾಲನೆ ಅವಶ್ಯ: ಸಚಿವ ಆರ್.ಬಿ. ತಿಮ್ಮಾಪುರ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಅದ್ದೂರಿ ಮೆರವಣಿಗೆ  

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 4:38 IST
Last Updated 16 ಜುಲೈ 2025, 4:38 IST
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು
ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು   

ಬಾಗಲಕೋಟೆ: ಶೋಷಣೆಗೆ ಒಳಗಾದ ಸಣ್ಣ, ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಜಾತಿ, ಮತಗಳ ಭೇದ ತೊರೆದು ಕ್ರಾಂತಿ ಮಾಡಿದ ಬಸವಾದಿ ಶರಣರ ತತ್ವ, ಆದರ್ಶಗಳು ಇಂದು ಅವಶ್ಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನವನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮದಿಂದ ನಡೆಯದೇ ಧರ್ಮ, ಧರ್ಮಗಳಲ್ಲಿ ಕದನ, ಮೇಲು‌–ಕೀಳು ಅಸ್ಪೃಶ್ಯತೆ ಹೋಗದಿದ್ದರೆ ಮುಂದೊಂದು ದಿನ ಮುಂದಿನ ಪೀಳಿಗೆ ಬೇರೆ ಧರ್ಮ ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುವುದಕ್ಕಿಂತ ಪೂರ್ವದಲ್ಲಿ ಮಠಾಧಿಪತಿಗಳು, ಬುದ್ಧಿಜೀವಿಗಳು, ಸಾಮಾಚಿಕ ಚಿಂತಕರು ಹಾಗೂ ರಾಜಕಾರಣಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.  

ADVERTISEMENT

ಶರಣರ ತತ್ವ ಆಚರಣೆಗೆ ಬದ್ಧರಾಗಬೇಕಿದ್ದು, ಅಸ್ಪೃಶ್ಯತೆ ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಯುವ ಮಿತ್ರರು  ಮುಂದಾಗಬೇಕು. ಹಕ್ಕಗಳನ್ನು ಪಡೆದುಕೊಳ್ಳಲು ಒಗ್ಗೂಡುವ ಅಗತ್ಯವಿದೆ. ಉದ್ಯೋಗದಿಂದ ವಂಚಿತರಾಗಿ ಎಲ್ಲ ಸಮಾಜಗಳು ಬೀದಿ ಪಾಲಾಗುತ್ತಿವೆ. ಮೂಲ ಕಸಬನ್ನು ಗೌರವಿಸಿ ಕಾಲಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ಕೊಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಅನುಭವ ಭಾರತಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಸಮುದಾಯ ಮುಖಂಡರಾದ ಮಲ್ಲಣ್ಣ ಹಡಪದ, ಅಶೋಕ ನಾವಿ, ಲಕ್ಷ್ಮಣ ಹಡಪದ, ಎಚ್.ಪಿ. ವೈದ್ಯ ಇದ್ದರು.

ಸಮ ಸಮಾಜಕ್ಕೆ ಶರಣರ ಶ್ರಮ

ಬಾಗಲಕೋಟೆ: ಸಮ ಸಮಾಜ ನಿರ್ಮಾಣ ಮಾಡುವುದಕ್ಕಾಗಿ 12ನೇ ಶತಮಾನದ ಶರಣರು ಶ್ರಮಿಸಿದ್ದಾರೆ. ಅವರ ಸಿದ್ಧಾಂತಗಳಿಗೆ ತಿಲಾಂಜಲಿಯನ್ನಿಟ್ಟಿದ್ದೇವೆ. ಇದರಿಂದ ಅವರ ತತ್ವಗಳಿಗೆ ಅವಮಾನ ಮಾಡಿದಂತಾಗುತ್ತಿದೆ. ಸಮಾಜ ಅಭಿವೃದ್ದಿ ಹೊಂದಬೇಕಾದರೆ ಪರಿವರ್ತನೆಗೆ ಮುಂದಾಗಬೇಕಿದೆ ಶಾಸಕ ಜೆ.ಟಿ. ಪಾಟೀಲ ಹೇಳಿದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ಉನ್ನತ ಶಿಕ್ಷಣ ಪಡೆದುಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ಮಕ್ಕಳಲ್ಲಿ ಶರಣರ ಆದರ್ಶಗಳನ್ನು ತುಂಬುವ ಕೆಲಸವಾಗಬೇಕು ಎಂದು ಹೇಳಿದರು. ಉಪನ್ಯಾಸ ನೀಡಿದ ಬಸವಲಿಂಗ ಸ್ವಾಮೀಜಿ ಮಾತನಾಡಿ ಶರಣರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಲಿಂಗ ಪೂಜೆಯಿಂದ ಏಕಾಗ್ರತೆ ಹಾಗೂ ಉಸಿರಾಟ ಹತೋಟಿಯಲ್ಲಿರುವುದರಿಂದ ಲಿಂಗ ಪೂಜೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಜಾನಪದ ಕಲಾತಂಡಗೊಂದಿಗೆ ನಗರದ ನಾನಾ ಕಡೆ ಸಂಚರಿಸಿ ಡಾ.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.