
ಬಾಗಲಕೋಟೆ: ದೇಶದ ಭವಿಷ್ಯದ ಆರೋಗ್ಯ ರಕ್ಷಕರಾಗಿರುವ ವೈದ್ಯಕೀಯ ವಿದ್ಯಾರ್ಥಿಗಳು ತಾವು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಭಗವಾನ್ ಬಿ.ಸಿ ಕರೆ ನೀಡಿದರು.
ನವನಗರದ ಕಲಾಭವನದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕಾಲೇಜು ಆವರಣ ಹಾಗೂ ಅಂಗಾಂಗ ದಾನದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ತಂಬಾಕು ಜಗಿಯುವ ಪದ್ಧತಿ ಹೆಚ್ಚಾಗಿದ್ದು, ಇದು ಮುಂದಿನ ಪೀಳಿಗೆಗೂ ಮಾರಕವಾಗಿ ಪರಿಣಮಿಸುತ್ತಿದೆ. ಕಿದ್ವಾಯಿ ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ ಸುಮಾರು 80 ಸಾವಿರ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಇದರಲ್ಲಿ ಶೇ 25 ರಷ್ಟು ಪ್ರಕರಣಗಳು ತಂಬಾಕು ಸೇವನೆಯಿಂದ ಉಂಟಾಗುತ್ತಿವೆ ಎಂದು ಡಾ.ಭಗವಾನ್ ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಅಂಗಾಂಗ ದಾನಿಗಳ ತೀವ್ರ ಕೊರತೆಯಿದೆ. ವಾರ್ಷಿಕವಾಗಿ 3 ರಿಂದ 4 ಲಕ್ಷ ಅಂಗಾಂಗಗಳ ಅವಶ್ಯಕತೆ ಇದ್ದರೂ ಕೇವಲ 16 ರಿಂದ 17 ಸಾವಿರ ಟ್ರಾನ್ಸ್ ಪ್ಲಾಂಟ್‌ಗಳು ಮಾತ್ರ ನಡೆಯುತ್ತಿವೆ. ಒಬ್ಬ ವ್ಯಕ್ತಿ ಬ್ರೈನ್ ಡೆಡ್ ಆದಾಗ ಆತನ ಅಂಗಾಂಗ ದಾನ ಮಾಡುವುದರಿಂದ ಸುಮಾರು 8 ಜನರ ಪ್ರಾಣ ಉಳಿಸಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀಳಗಿ ಶಾಸಕ ಜೆ.ಟಿ.ಪಾಟೀಲ, ವಿದ್ಯಾರ್ಥಿಗಳಿಗೆ ಅಥವಾ ಸಮಾಜಕ್ಕೆ ದುಶ್ಚಟ ಮಾಡಬೇಡಿ ಎಂದು ಹೇಳುವ ಕೆಲಸ ಮೊದಲು ನಮ್ಮಿಂದಲೇ ಆರಂಭವಾಗಬೇಕು. ಬೇರೆಯವರಿಗೆ ಬುದ್ಧಿ ಹೇಳುವ ಮುನ್ನ ನಾವು ಅದನ್ನು ಪಾಲಿಸಬೇಕು. ನಾವೇ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಬೇರೆಯವರಿಗೆ ಬುದ್ಧಿ ಹೇಳಿದರೆ ಅದಕ್ಕೆ ಬೆಲೆ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರು ಉಪಸ್ಥಿತರಿದ್ದರು.
ದೇಶದಲ್ಲಿ ಶೇ 20 ರಿಂದ 30 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ದಾಸರಾಗುತ್ತಿರುವುದು ಆತಂಕಕಾರಿ ವಿಷಯ
-ಡಾ.ಭಗವಾನ್ ಬಿ.ಸಿ ಉಪ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.