ADVERTISEMENT

ಬಾಗಲಕೋಟೆ: ವಿದ್ಯುತ್‌ ದರ ಏರಿಕೆಗೆ ಮುಂದಾದ ಹೆಸ್ಕಾಂ

ಪ್ರತಿ ಯುನಿಟ್‌ಗೆ ₹26 ಪೈಸೆ, ನಿಗದಿತ ಶುಲ್ಕದಲ್ಲಿ ₹35 ಏರಿಕೆಗೆ ಪ್ರಸ್ತಾವ

ಬಸವರಾಜ ಹವಾಲ್ದಾರ
Published 26 ಜನವರಿ 2024, 5:29 IST
Last Updated 26 ಜನವರಿ 2024, 5:29 IST
ವಿದ್ಯುತ್‌ ಗ್ರಿಡ್‌ವೊಂದರ ದೃಶ್ಯ
ವಿದ್ಯುತ್‌ ಗ್ರಿಡ್‌ವೊಂದರ ದೃಶ್ಯ   

ಬಾಗಲಕೋಟೆ: ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯು ನಷ್ಟವನ್ನು ಸರಿದೂಗಿಸಿಕೊಳ್ಳಲು ವಿದ್ಯುತ್ ದರ ಏರಿಕೆಗೆ ಮುಂದಾಗಿದೆ. ಆ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಲು ಮುಂದಾಗಿದೆ.

2022–23ರಲ್ಲಿ ನಿರ್ವಹಣೆಗೆ ₹11,422 ಕೋಟಿ ಅಗತ್ಯವಿತ್ತು. ಆದರೆ, 10,954 ಕೋಟಿ ಆದಾಯ ಸಂಗ್ರಹವಾಗಿದ್ದು, ₹468 ಕೋಟಿ ಕೊರತೆ ಇದೆ. 2024–25ರಲ್ಲಿ ₹11,776 ನಿರ್ವಹಣೆಗೆ ಅಗತ್ಯವಿದ್ದು, ₹11,502 ಕೋಟಿ ಆದಾಯದ ನಿರೀಕ್ಷೆ ಇದೆ. ₹273 ಕೋಟಿ ಕೊರತೆಯಾಗುತ್ತಿದೆ. ಇದನ್ನು ಬೆಲೆ ಏರಿಕೆ ಮೂಲಕ ಸರಿದೂಗಿಸಿಕೊಳ್ಳಲು ಸಜ್ಜಾಗಿದೆ.

ಪ್ರತಿ ಯುನಿಟ್‌ ವಿದ್ಯುತ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕದಲ್ಲಿಯೂ ₹35 ಹೆಚ್ಚಿಸಲು ಕರ್ನಾಟಕ ವಿದ್ಯುಚ್ಛಕ್ತಿ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದೆ. ಜತೆಗೆ ಸಾರ್ವಜನಿಕರಿಂದಲೂ ಆಕ್ಷೇಪ ಆಹ್ವಾನಿಸಲಾಗಿದ್ದು, ಫೆ.8ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 

ADVERTISEMENT

ಗೃಹ, ವೃತ್ತಿಪರ ಶೈಕ್ಷಣಿಕ ಸಂಸ್ಥೆ, ನೀರು ಸರಬರಾಜು ಘಟಕ, ಬೀದಿ ದೀಪ, ಕೈಗಾರಿಕೆ ಸೇರಿದಂತೆ ಎಲ್ಲ ವಿಭಾಗಗಳ ಬೆಲೆ ಏರಿಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರತಿ ವರ್ಷ ಬೆಲೆ ಏರಿಕೆಯ ಬಿಸಿ ಗ್ಯಾರಂಟಿ ಎಂಬಂತಾಗಿದೆ.

ಗೃಹ ಬಳಕೆಯ ಬಹಳಷ್ಟು ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, 200 ಯುನಿಟ್‌ಗಳವರೆಗೆ ಉಚಿತವಿಲ್ಲ. ವರ್ಷದ ಸರಾಸರಿ ಆಧರಿಸಿ ಉಚಿತ ಬಳಕೆಯ ಯುನಿಟ್‌ ಸಂಖ್ಯೆಯನ್ನು ನಿಗದಿ ಮಾಡಲಾಗಿದ್ದು, ಅದರ ಮೇಲೆ ಶೇ 10 ರಷ್ಟು ಯುನಿಟ್‌ ಹೆಚ್ಚುವರಿಯಾಗಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಬೇಸಿಗೆ ಬರುವುದರಿಂದ ಯುನಿಟ್‌ಗಳ ಬಳಕೆ ಹೆಚ್ಚಾದರೆ ವಿದ್ಯುತ್ ಬಿಲ್ ಭರಿಸಬೇಕಾಗುತ್ತದೆ.

200ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಗ್ರಾಹಕರಿಗೆ ಬಿಲ್ ಹೊರೆ ಹೆಚ್ಚಾಗಲಿದೆ. ಜತೆಗೆ ವೃತ್ತಿಪರ ಸಂಸ್ಥೆಗಳು, ಕೈಗಾರಿಕೆಗಳು, ವಾಣಿಜ್ಯ ಬಳಕೆದಾರರು ಸೇರಿದಂತೆ ಹಲವರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಗುಲಲಿದೆ.

‘ಉಚಿತ ವಿದ್ಯುತ್ ಯೋಜನೆಯ ಬಿಲ್‌ ಅನ್ನು ಸರ್ಕಾರ ಪಾವತಿಸುತ್ತದೆ. ಬಿಲ್‌ ಪಾವತಿಯ ಸರ್ಕಾರದ ಮೊತ್ತ ಹೆಚ್ಚಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗುತ್ತದೆ. ಇದರಿಂದ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಸರ್ಕಾರ ವೆಚ್ಚ ಸರಿದೂಗಿಸಲು ಬೇರೆ ವಸ್ತುಗಳ ದರ ಹೆಚ್ಚಳಕ್ಕೆ ಮುಂದಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು ನವನಗರ ನಿವಾಸಿ ಸುಭಾಷ ಕಿಲ್ಲೇದಾರ.

ವಿದ್ಯುತ್ ದರ ಏರಿಸುವ ಮುನ್ನ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಯಾವ ಬಳಕೆಗೆ ಎಷ್ಟು ಖರ್ಚಾಗುತ್ತದೆ. ಸೋರಿಕೆ ಎಷ್ಟಿದೆ. ಅದನ್ನು ತಡೆಯಲು ಏನು ಕ್ರಮಕೈಗೊಳ್ಳಲಾಗಿದೆ ಎಂಬ ವಿವರವನ್ನೂ ಕಂಪನಿಗಳು ಗ್ರಾಹಕರ ಮುಂದಿಡಬೇಕು. ಪ್ರತಿ ವರ್ಷ ದರ ಏರಿಸಿದರೆ ಕೈಗಾರಿಕೆಗಳಿಗೆ ಬಹಳ ಹೊಡೆತ ಬೀಳುತ್ತದೆ ಎನ್ನುತ್ತಾರೆ ಅವರು.

ಪ್ರತಿ ವರ್ಷ ಆಯೋಗ ಕರೆಯುವ ಸಭೆಯಲ್ಲಿ ಆಕ್ಷೇಪಣೆ ಸಲ್ಲಿಕೆಯಾಗುತ್ತದೆಯಾದರೂ, ವಿದ್ಯುತ್ ದರ ಏರಿಕೆ ಆಗುತ್ತಲೇ ಇದೆ. 

₹11502 ಕೋಟಿ ಆದಾಯದ ನಿರೀಕ್ಷೆ ಪ್ರತಿ ಯುನಿಟ್‌ ವಿದ್ಯುತ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕದಲ್ಲಿಯೂ ₹35 ಹೆಚ್ಚಿಸಲು ಪ್ರಸ್ತಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.