ADVERTISEMENT

ಬಾಗಲಕೋಟೆ | ಪಾವತಿಗೆ ಹೆಸ್ಕಾಂ ಮನವಿ; ಮನ್ನಾಕ್ಕೆ ರೈತರ ಆಗ್ರಹ

1,795 ರೈತರಿಂದ ಪಾವತಿ, 34,044 ರೈತರದ್ದು ಬಾಕಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:58 IST
Last Updated 9 ಆಗಸ್ಟ್ 2025, 3:58 IST
–
   

ಬಾಗಲಕೋಟೆ: 2018ರಲ್ಲಿ ₹50 ಪಾವತಿಸಿ ಅಕ್ರಮವಾಗಿದ್ದ ಪಂಪ್‌ಸೆಟ್‌ಗಳ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲಾಗಿತ್ತು. ಅಂತಹ ಪಂಪ್‌ಸೆಟ್‌ಗಳವರು ಮೂಲಸೌಲಭ್ಯ ಕಲ್ಪಿಸಲು ₹10 ಸಾವಿರ ಹಾಗೂ ಪ್ರತಿ ಎಚ್‌ಪಿಗೆ ₹1,370 ಹಣ ಪಾವತಿಸುವಂತೆ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮ ರೈತರಿಗೆ ನೋಟಿಸ್‌ ಜಾರಿಗೊಳಿಸಿದೆ.

ಜಿಲ್ಲೆಯಲ್ಲಿ ಮೂರು ವಿಭಾಗಗಳಿದ್ದು, ಬಾಗಲಕೋಟೆ ವಿಭಾಗದಲ್ಲಿ 9,017, ಜಮಖಂಡಿ ವಿಭಾಗದಲ್ಲಿ 17,703 ಹಾಗೂ ಮುಧೋಳ ವಿಭಾಗದಲ್ಲಿ 9,169 ರೈತರು ₹50 ಪಾವತಿಸಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದರು. ಆಗಲೇ ರಾಜ್ಯ ಸರ್ಕಾರವು ₹10 ಸಾವಿರ ಪಾವತಿಸಲು ಸೂಚಿಸಿತ್ತು. 

ಬಾಗಲಕೋಟೆ ವಿಭಾಗದ 677, ಜಮಖಂಡಿ ವಿಭಾಗದ 894, ಮುಧೋಳ ವಿಭಾಗದ 224 ರೈತರು ₹10 ಸಾವಿರ ಪಾವತಿಸಿದ್ದರು. 34,044 ಮಂದಿ ರೈತರು ಹಣ ಪಾವತಿಯನ್ನು ಅಂದಿನಿಂದ ಬಾಕಿ ಉಳಿಸಿಕೊಂಡು ಬಂದಿದ್ದಾರೆ.

ADVERTISEMENT

ಅಕ್ರಮವಾಗಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆದಿರುವ ರೈತರು ನೂರಾರು ಅಡಿಗಳ ದೂರದವರೆಗೆ ವಿದ್ಯುತ್ ಕಂಬಗಳಿಲ್ಲದೇ, ಕಟ್ಟಿಗೆ ಕಂಬ ಹಾಕಿ, ಗಿಡಗಳಿಗೆ ಹಾಕಿಕೊಂಡು ಹೋಗಿ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ರೈತರ ಅಥವಾ ಸಾರ್ವಜನಿಕರ ಜೀವಕ್ಕೆ ಹಾನಿಯಾಗುವ ಅಪಾಯವಿದೆ. ಇದನ್ನು ತಪ್ಪಿಸಲು ರೈತರಿಗೆ ₹10 ಸಾವಿರ ಪಾವತಿಸಿಕೊಂಡು ವಿದ್ಯುತ್ ಕಂಬ ಹಾಕಿಕೊಡುವ ಕೆಲಸವನ್ನು ಮಾಡಲಾಗುತ್ತಿದೆ.

ರೈತರು ಅಳವಡಿಸಿಕೊಂಡಿರುವ ಪಂಪ್‌ಸೆಟ್ ಎಚ್‌ಪಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ (ಪ್ರತಿ ಎಚ್‌ಪಿಗೆ ₹1,370 ರಂತೆ) ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದಲೂ ರೈತರು ಉಳಿಸಿಕೊಂಡಿರುವ ಬಾಕಿಯನ್ನು ವಸೂಲು ಮಾಡುವಂತೆ ವಿದ್ಯುತ್ ನಿಗಮಗಳ ಮೇಲೆ ಒತ್ತಡವಿತ್ತು. ಹಾಗೆಯೇ ಮುಂದೂಡಿಕೊಂಡು ಬಂದಿದ್ದ ಅಧಿಕಾರಿಗಳು, ಈಗ ಕರಪತ್ರದ ಮೂಲಕ, ನೋಟಿಸ್ ನೀಡುವ ಮೂಲಕ, ಡಂಗುರ ಸಾರಿಸುವ ಮೂಲಕ ಬಾಕಿ ವಸೂಲಾತಿಗೆ ಮುಂದಾಗಿದೆ.

ಪ್ರತಿ ವರ್ಷ ವಿದ್ಯುತ್‌ ದರದಲ್ಲಿ ಹೆಚ್ಚಳ ಮಾಡಿದ ನಂತರವೂ ನಿಗಮಗಳು ನಷ್ಟದಲ್ಲಿವೆ. ಶಕ್ತಿ ಯೋಜನೆಯಡಿ ಮನೆಗಳಿಗೆ ಸರಬರಾಜಾಗುವ (200 ಯುನಿಟ್‌ವರೆಗೆ) ವಿದ್ಯುತ್ ಅನ್ನು ಉಚಿತಗೊಳಿಸಿದ ನಂತರ ವಿದ್ಯುತ್ ನಿಗಮಗಳ ಆರ್ಥಿಕ ಸ್ಥಿತಿ ಗಂಭೀರವಾಗಿದೆ.

‘2018ರಲ್ಲಿ ಅಕ್ರಮ ಸಕ್ರಮಗೊಳಿಸಿಕೊಳ್ಳುವಾಗಲೇ ಹಣ ಪಾವತಿಸಿಕೊಳ್ಳಬೇಕು ಎಂದು ಸರ್ಕಾರದಿಂದ ನಿರ್ದೇಶನವಿತ್ತು. ಕೆಲವು ರೈತರು ಪಾವತಿಸಿದರು. ಉಳಿದ ರೈತರು ಪಾವತಿಸಲಿಲ್ಲ. ಈಗ ನಿಗಮಗಳಿಗೆ ವಸೂಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ, ಹಣ ಪಾವತಿಸುವಂತೆ ತಿಳಿಸಲಾಗುತ್ತಿದೆ ಎಂದು ಬಾಗಲಕೋಟೆ ಅಧೀಕ್ಷಕ ಎಂಜಿನಿಯರ್ ಸಿ.ಬಿ. ಯಂಕಂಚಿ ಹೇಳಿದರು.

‘ನೋಟಿಸ್ ತಲುಪಿದ ಏಳು ದಿನಗಳಲ್ಲಿ ನಿಮಗೆ ಸೂಚಿಸಿರುವ ಮೊತ್ತವನ್ನು ಪಾವತಿಸಬೇಕು. ಇಲ್ಲದಿದ್ದರೆ, ಪಂಪ್‌ಸೆಟ್‌ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಏಕಾಏಕಿ ವಸೂಲಿಗೆ ಮುಂದಾದರೆ, ಎಲ್ಲಿಂದ ಹಣ ಪಾವತಿಸುವುದು. ಪಾವತಿಸಬೇಕು ಎಂದು ಹೇಳುತ್ತಿರುವ ಹಣವನ್ನು ಮನ್ನಾ ಮಾಡಬೇಕು’ ಎಂದು ರೈತರ ಸಂಗಮೇಶ ಪಾಟೀಲ ಮನವಿ ಮಾಡಿದರು.

ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುವ ವಿದ್ಯುತ್‌ ಈಗಲೂ ಉಚಿತವಾಗಿದೆ. ಸೌಲಭ್ಯಗಳ ಸುಧಾರಣೆಗೆ ಸೂಚಿಸಿರುವ ಹಣ ಪಾವತಿಸಬೇಕು
ಸಿ.ಬಿ. ಯಂಕಂಚಿ ಅಧೀಕ್ಷಕ ಎಂಜಿನಿಯರ್ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.