ADVERTISEMENT

ಉನ್ನತ ಶಿಕ್ಷಣಕ್ಕೆ ದೊರೆತಿಲ್ಲ ಆದ್ಯತೆ

ಆರಂಭವಾಗದ ವೈದ್ಯಕೀಯ ಕಾಲೇಜು, ಮುಚ್ಚಿ ಹೋದ ಸ್ನಾತಕೋತ್ತರ ಕೇಂದ್ರ

ಬಸವರಾಜ ಹವಾಲ್ದಾರ
Published 7 ಆಗಸ್ಟ್ 2022, 7:06 IST
Last Updated 7 ಆಗಸ್ಟ್ 2022, 7:06 IST
ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ನೋಟ
ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ನೋಟ   

ಬಾಗಲಕೋಟೆ: ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಸಂಖ್ಯೆ ಹೊಸ ಜಿಲ್ಲೆ ರಚನೆಯಾದ ನಂತರ ಹೆಚ್ಚಾಗಿದೆ. ಆದರೆ, ಉನ್ನತ ಶಿಕ್ಷಣದಲ್ಲಿ ಜಿಲ್ಲೆ ಇಂದಿಗೂ ಹಿಂದುಳಿದಿದೆ.

ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಹೊಸದಾಗಿ ಕಿರಿಯ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಲಾಗಿದೆ. ಆದರೆ, ಹಳೆಯ ಶಾಲೆಗಳ ಕೊಠಡಿಗಳು ಕುಸಿದಿದ್ದು, ದುರಸ್ತಿ ಕಾಣುತ್ತಿಲ್ಲ. ಹಲವು ಕಡೆಗಳಲ್ಲಿ ಕಟ್ಟಡವೇ ಶಿಥಿಲಾವಸ್ಥೆಯಲ್ಲಿದ್ದರೂ, ಮಕ್ಕಳು ಅಲ್ಲಿಯೇ ಕಲಿಯುತ್ತಿದ್ದಾರೆ. ಹಲವಾರು ಅಂಗನವಾಡಿಗಳ ಸ್ಥಿತಿಯೂ ಭಿನ್ನವಾಗಿಲ್ಲ

ಹಲವು ಕಡೆಗಳಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ಸರಿಯಾದ ರಸ್ತೆಗಳಿಲ್ಲ. ಬಸ್‌ ಸಂಚಾರವಿಲ್ಲದ್ದರಿಂದ ನಡೆದುಕೊಂಡೇ ಹೋಗಬೇಕಾಗಿದೆ. ಬಸ್‌ ಸಂಖ್ಯೆಯೂ ಕಡಿಮೆ ಇರುವುದರಿಂದ ತಳ್ಳಾಡಿಕೊಂಡೇ ಪ್ರಯಾಣ ಮಾಡಬೇಕಾಗಿದೆ. ಹಾಗಾಗಿ, ಹಲವಾರು ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಒಂದು ವೈದ್ಯಕೀಯ, ಇಂದು ದಂತ ವೈದ್ಯಕೀಯ ಕಾಲೇಜು, ಆರು ಆಯುಷ್‌ ಕಾಲೇಜು, ಎರಡು ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಎಲ್ಲವೂ ಖಾಸಗಿ ಸಂಸ್ಥೆಗಳಿಗೆ ಸೇರಿವೆ. ಎರಡು ಸರ್ಕಾರಿ ಹಾಗೂ ಐದು ಖಾಸಗಿ ಪಾಲಟೆಕ್ನಿಕ್‌ ಸಂಸ್ಥೆಗಳಿವೆ. 15 ಸರ್ಕಾರಿ, 42 ಖಾಸಗಿ ಪದವಿ ಕಾಲೇಜುಗಳಿವೆ.

ಸರ್ಕಾರದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯ ದೊರಕಿಲ್ಲ. ಒಂದೇ ಒಂದು ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಸರ್ಕಾರಿ ಕಾಲೇಜು ಜಿಲ್ಲೆಯಲ್ಲಿಲ್ಲ. ಸರ್ಕಾರವು ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಐದು ವರ್ಷಗಳು ಕಳೆದರೂ ಆರಂಭವಾಗಿಲ್ಲ. ಬಾಗಲಕೋಟೆಯಲ್ಲಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮುಚ್ಚಿ ಹೋಗಿದೆ.

ಸ್ವಾತಂತ್ರ್ಯಪೂರ್ವದ ಬಸವೇಶ್ವರ ವಿದ್ಯಾವರ್ಧಕ ಸಂಘ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ಸಂಸ್ಥೆಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಹಲವಾರು ಖಾಸಗಿ ಶಾಲೆಗಳು ತಲೆ ಎತ್ತಿವೆ. ಶಾಲಾ–ಕಾಲೇಜುಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳಿಲ್ಲ.

ಸಕ್ಕರೆ ಕಾರ್ಖಾನೆಯಲ್ಲಿ ಜಿಲ್ಲೆಯ ಒಂದಷ್ಟು ಜನರಿಗೆ ಉದ್ಯೋಗ ಸಿಕ್ಕಿದ್ದು ಬಿಟ್ಟರೆ, ಉಳಿದಂತೆ ಕೈಗಾರಿಕೆಗಳು ಆರಂಭವಾಗಿಲ್ಲ. ಹೀಗಾಗಿ ಇಂದಿಗೂ ಇಲ್ಲಿನ ಜನತೆ ದುಡಿಯಲು ಗೋವಾ, ಮಂಗಳೂರು, ಬೆಂಗಳೂರಿಗೆ ಹೋಗುತ್ತಾರೆ. ಇಲ್ಲಿಂದ ಮಂಗಳೂರು ಹಾಗೂ ಗೋವಾಕ್ಕೆ ನಿತ್ಯ 40 ಹೆಚ್ಚು ಬಸ್‌ಗಳು ಸಂಚರಿಸುತ್ತವೆ.

ವೃತ್ತಿಪರ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕಿದೆ. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಕೈಗಾರಿಕೆಗಳನ್ನು ಸ್ಥಾಪಿಸುವ ಕೆಲಸವೂ ಆಗಬೇಕು. 2011ರ ಪ್ರಕಾರ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 80ರಷ್ಟಿದೆ. ಈಗ ಅದರ ಪ್ರಮಾಣ ಮತ್ತಷ್ಟು ಹೆಚ್ಚಿರಬಹುದು. ಉನ್ನತ ಶಿಕ್ಷಣಕ್ಕೆ ಆದ್ಯತೆ ಸಿಗಬೇಕಿದೆ.

ತೋ.ವಿ.ವಿ. ಉದಯ

ಬಾಗಲಕೋಟೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿವೆ. ಬಾಗಲಕೋಟೆಗೆ ಇದ್ದ ಆ ಕೊರತೆ 2008ರಲ್ಲಿ ಅಸ್ತಿತ್ವಕ್ಕೆ ಬಂದ ತೋಟಗಾರಿಕೆ ವಿಶ್ವವಿದ್ಯಾಲಯ ನೀಗಿಸಿದೆ.

ದಾಳಿಂಬೆ, ದ್ರಾಕ್ಷಿ, ಚಿಕ್ಕು, ಲಿಂಬೆ, ಪೇರಲ, ಬಾಳೆ, ಮಾವು, ಅಂಜೂರ ಅಲ್ಲದೆ ಹೂವು, ಮಸಾಲೆ ಪದಾರ್ಥ, ತರಕಾರಿ ಬೆಳೆಯಲಾಗುತ್ತದೆ. ಇದೇ ಕಾರಣಕ್ಕೆ ತೋಟಗಾರಿಕೆ ವಿ.ವಿ. ಇಲ್ಲಿ ತಲೆ ಎತ್ತಿದೆ.

ಬಿಎಸ್‌ಸಿ ತೋಟಗಾರಿಕೆ ಜತೆಗೆ ಸರ್ಟಿಫಿಕೇಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿದೆ. ವಿ.ವಿ.ಯು ಸಂಶೋಧನೆಗೆ ಒತ್ತು ನೀಡಿದ್ದು, ಅದರ ಲಾಭ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.