ADVERTISEMENT

ಶಿವಾಜಿ ಮೂರ್ತಿ ಮರು ಪ್ರತಿಷ್ಠಾಪನೆಗೆ ಗಡುವು ನೀಡಿದ ಹಿಂದು ಜಾಗರಣ ವೇದಿಕೆ, BJP

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 11:15 IST
Last Updated 19 ಆಗಸ್ಟ್ 2023, 11:15 IST
ಪ್ರತಿಭಟನಾಕಾರರಿಂದ ಮೆರವಣಿಗೆ
ಪ್ರತಿಭಟನಾಕಾರರಿಂದ ಮೆರವಣಿಗೆ   

ಬಾಗಲಕೋಟೆ: ನಗರದ ಸೋನಾರ ಬಡಾವಣೆಯಿಂದ ತೆರವುಗೊಳಿಸಿರುವ ಛತ್ರಪತಿ ಶಿವಾಜಿ ಮೂರ್ತಿಯನ್ನು ನಗರಸಭೆ, ಜಿಲ್ಲಾಡಳಿತ ಅದೇ ಸ್ಥಳದಲ್ಲಿ ಮರುಪ್ರತಿಷ್ಠಾಪಿಸಬೇಕು ಎಂದು ಹಿಂದು ಜಾಗರಣ ವೇದಿಕೆ, ಬಿಜೆಪಿ ಕರೆ ನೀಡಿದ್ದ ಬಾಗಲಕೋಟೆ ಬಂದ್ ಶನಿವಾರ ಯಶಸ್ವಿಯಾಗಿತು.

ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ಅಂಗಡಿ, ಹೋಟೆಲ್‌ ಸೇರಿದಂತೆ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ಬಸ್ ಸಂಚಾರ ಎಂದಿನಂತೆ ಇತ್ತು. ಶಾಲಾ–ಕಾಲೇಜುಗಳೂ ನಡೆದವು. ಪ್ರತಿಭಟನಾಕಾರರು ಬಸವೇಶ್ವರ ವೃತ್ತದಿಂದ ನಗರದಲ್ಲಿ ಮೆರವಣಿಗೆ ಮಾಡಿದರು. 

ಹಿಂದು ಜಾಗರಣ‌ ವೇದಿಕೆ ಮುಖಂಡರು, ಬಿಜೆಪಿ ಮುಖಂಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮೂರ್ತಿ ತೆರವುಗೊಳಿಸಿದ್ದಕ್ಕೆ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಲಾಯಿತು.

ADVERTISEMENT

ಧಿಕ್ಕಾರದ ಘೋಷಣೆಯ ಭಿತ್ತಿಪತ್ರ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ತರಕಾರಿ ಮಾರುಕಟ್ಟೆ ಬಂದ್ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ತರಕಾರಿ ವ್ಯಾಪಾರಸ್ಥರೊಬ್ಬರ ಜೊತೆಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ಹಿಂದು ಜಾಗರಣ ವೇದಿಕೆ ಉತ್ತರ ಕರ್ನಾಟಕ ಸಂಯೋಜಕ ಶ್ರೀಕಾಂತ ಹೊಸಕೇರಿ ಮಾತನಾಡಿ, ಆ.25ರೊಳಗೆ ಅಧಿಕಾರಿಗಳು ಶಿವಾಜಿ ಮೂರ್ತಿಯನ್ನು ಮೊದಲಿದ್ದ ಸ್ಥಳದಲ್ಲೇ ಮರು ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ, ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಾಗಲಕೋಟೆ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಹಿಂದೂ ಸಮಾಜ ಸ್ಥಾಪಿಸಿದ ವ್ಯಕ್ತಿಯ ಮೂರ್ತಿಯನ್ನೇ ತೆರವುಗೊಳಿಸುವ ಅಧಿಕಾರಿಗಳಿಗೆ ಇತಿಹಾಸದ ಅರಿವಿಲ್ಲ. ಶಾಸ್ತ್ರದ ಜತೆಗೆ ಖಡ್ಗ ಹಿಡಿಯಬೇಕು. ರಕ್ತಕ್ಕೆ ರಕ್ತದಿಂದಲೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಭಾಂಡಗೆ, ಬಸವಲಿಂಗಪ್ಪ ನಾವಲಗಿ, ಬಸವರಾಜ ಯಂಕಂಚಿ, ರಾಜು ನಾಯ್ಕರ, ಶಾಂತಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.