ADVERTISEMENT

ಜಮಖಂಡಿ: ಕೃಷ್ಣೆಯ ದಡದಲ್ಲಿ ಅದ್ದೂರಿ ಕೃಷ್ಣಾ ಆರತಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:59 IST
Last Updated 17 ಆಗಸ್ಟ್ 2025, 4:59 IST
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ ಹಿಂಬಾಗದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಕೃಷ್ಣಾಆರತಿ ಜರುಗಿತು
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ ಹಿಂಬಾಗದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಕೃಷ್ಣಾಆರತಿ ಜರುಗಿತು   

ಜಮಖಂಡಿ: ತುಂಬಿ ಹರಿಯುತ್ತಿರುವ ಕೃಷ್ಣೆಯ ತೀರದಲ್ಲಿ ಜನಸಾಗರವೇ ತುಂಬಿ ತುಳುಕುತ್ತಿತ್ತು. ವರ್ಣ ರಂಜಿತ ಬೆಳಕಿನ ಚಿತ್ತಾರದಲ್ಲಿ ಕೃಷ್ಣೆಯ ವೈಭೋಗ ನೋಡುಗರ ಕಣ್ಣು ತಣಿಸುವಂತಿತ್ತು. ಕೃಷ್ಣಾಆರತಿ ನೋಡಲು ಜನರು ಮುಗಿಬಿದ್ದಿದ್ದರು. ಉತ್ತರಭಾರತದ ಗಂಗಾ ನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ಕೃಷ್ಣಾ ನದಿಗೆ ಎರಡನೇ ಬಾರಿಗೆ ಕೃಷ್ಣಾ ಆರತಿಯನ್ನು ಕೃಷ್ಣಾ ತೀರದ ರೈತರು ಹಾಗೂ ವಿವಿಧ ಕಡೆಯಿಂದ ಆಗಮಿಸಿದ ಸಾವಿರಾರು ಜನರು ಕಣ್ತುಂಬಿಕೊಂಡರು.

ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ ಹಿಂಬಾಗದಲ್ಲಿ ಪವಿತ್ರ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಶನಿವಾರ ಎಂ.ಆರ್.ಎನ್ ನಿರಾಣಿ ಫೌಂಡೇಷನ ಹಾಗೂ ರೈತರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮುರಗೇಶ ನಿರಾಣಿಯವರ 60ನೇ ಜನ್ಮದಿನದ ನಿಮಿತ್ತ ಶನಿವಾರ ನಡೆದ ಕೃಷ್ಣಾ ಪುಣ್ಯ ಸ್ನಾನ, ಕೃಷ್ಣಾ ಆರತಿ, ಪಲ್ಲಕ್ಕಿ ಉತ್ಸವದಲ್ಲಿ ಸಾಗಾ ಸಾಧುಗಳ ಪಾಲ್ಗೊಂಡು ವಿಶೇಷವಾಗಿ ಆಚರಣೆ ಮಾಡಿದರು.

ಹಿಪ್ಪರಗಿ ಬ್ಯಾರೇಜ್ ಹಾಗೂ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ನದಿಯ ಸುತ್ತಲು ವಿವಿಧ ಬಣ್ಣಗಳ ಚಿತ್ತಾರ, ದೀಪಾಲಂಕಾರ ಕಣ್ಮನ ಸೆಳೆದವು. ಮುಂದೆ ಆರತಿ, ಹಿಂದೆ ಭರತನಾಟ್ಯ ನೋಡುಗರನ್ನು ಮೂಕವಿಸ್ಮಯಗೊಳಿಸಿದವು. ಎಲ್ಲೆಡೆ ಜಯಘೋಷಗಳು ಮೊಳಗಿದವು. ರೈತರು ಪೂಜೆಯಲ್ಲಿ ಪಾಲ್ಗೊಂಡು ತಾಯಿ ಕೃಷ್ಣೆಗೆ ನಮಿಸಿದರು. ಕೃಷ್ಣಾರತಿ ಪ್ರಾರಂಭವಾಗುತ್ತಿದ್ದಂತೆ ವಿವಿಧ ಮಂತ್ರಗಳನ್ನು ಹೇಳುವ ಮೂಲಕ ಗಂಟೆಯ ನಾದ ಹಾಗೂ ಶಂಕವನ್ನು ಊದುವ ಮೂಲಕ ಕೃಷ್ಣಾರತಿ ಪ್ರಾರಂಭ ಮಾಡಿದರು.

ADVERTISEMENT

ಕಂಕಣವಾಡಿ, ಮೈಗೂರ, ಮುತ್ತೂರ ಗ್ರಾಮದಿಂದ ತರಿಸಿರುವ ಐದು ಬೋಟ್‌ನಲ್ಲಿ ಶ್ರೀಗಳು, ಪಂಡಿತರು, ಅರ್ಚಕರು, ಮುತ್ತೈದೆಯರು ಹಾಗೂ ಗಣ್ಯರ ನೇತೃತ್ವದಲ್ಲಿ ಎಂ.ಆರ್ ಎನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ನದಿಯಲ್ಲಿ ಹೋಗಿ ಪೂರ್ವಾಭಿಮುಖವಾಗಿ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಗ್ರಾಮಳಿಂದ ಮಹಿಳೆಯರು ಆರತಿಯೊಂದಿಗೆ ಆಗಮಿಸಿ ನದಿಗೆ ಆರತಿ ಮಾಡಿ ಪರಸ್ಪರ ಉಡಿ ತುಂಬಿಸಿಕೊಂಡರು, ಹೋಳಿಗೆ ಸಮೇತ ವಿವಿಧ ಸಿಹಿ ಪದಾರ್ಥಗಳನ್ನು ನದಿಗೆ ಅರ್ಪಿಸಿದರು. ಕಲಾತಂಡದವರಿಂದ ಭರತನಾಟ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ ಹಿಂಬಾಗದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಕೃಷ್ಣಾಆರತಿ ಜರುಗಿತು
ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‌ ಹಿಂಬಾಗದಲ್ಲಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಕೃಷ್ಣಾಆರತಿ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.