
ಬಾಗಲಕೋಟೆ: ತಳಿ ಅಭಿವೃದ್ಧಿಯಲ್ಲಿ ಕೇವಲ ಇಳುವರಿಗೆ ಪ್ರಾಮುಖ್ಯತೆ ನೀಡದೇ ಪೋಷಕಾಂಶ ಮತ್ತು ರುಚಿಗೆ ಆದ್ಯತೆ ನೀಡಬೇಕು ಎಂದು ಯುಎಸ್‍ಎ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಭೀಮನಗೌಡ ಪಾಟೀಲ ಹೇಳಿದರು.
ತೋಟಗಾರಿಕೆ ವಿವಿಯ ಪ್ರೇಕ್ಷಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೋವಿವಿಯ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಣ್ಣು ಮತ್ತು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಾಗಿತ್ತು. ಮಕ್ಕಳಿಗೆ ಇವುಗಳ ಸೇವನೆಯ ಮಹತ್ವ ತಿಳಿಸಿ ಕೊಡುವುದು ಅವಶ್ಯವಾಗಿದೆ ಎಂದರು.
ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ವಿ. ಹಿತ್ತಲಮನಿ ಮಾತನಾಡಿ, ರೈತನಿಗೆ ಸಹಾಯ ಹಸ್ತನೀಡುವ ತೋವಿವಿ ಸದಾಕಾಲ ಬೆಳೆಯಬೇಕು. ಒಪ್ಪಂದಗಳನ್ನು ಮಾಡಿಕೊಂಡು ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪಡಿಸಬೇಕು. ರೈತರ ಅಭಿವೃದ್ಧಿಗಾಗಿಯೇ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
ತೋಟಗಾರಿಕೆ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ವಿಶ್ವವಿದ್ಯಾಲಯಗಳು ಬೆಳೆದಲ್ಲಿ ರೈತರು ಬೆಳೆಯುತ್ತಾರೆ. ಒಂದು ಕಾಲದಲ್ಲಿ ಆಹಾರ ಉತ್ಪಾದನೆಯಲ್ಲಿ ಕಡಿಮೆಯಾಗಿ ಒಂದು ಹೊತ್ತು ಊಟ ಬಿಡುವ ಪರಿಸ್ಥಿತಿ ಉಂಟಾಗಿತ್ತು. ಆದರೆ, ಈಗ ವಿಜ್ಞಾನಿಗಳ ಹೊಸ, ಹೊಸ ಸಂಶೋಧನೆಯಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂದರು.
ತೋಟಗಾರಿಕೆ ವಿವಿ ವಿಶ್ರಾಂತ ಕುಲಪತಿ ಎಸ್.ಬಿ. ದಂಡಿನ ಮಾತನಾಡಿ ಆಹಾರ, ಆರೋಗ್ಯ, ಆದಾಯಕ್ಕೆ ತೋಟಗಾರಿಕೆ ಎಂಬ ಹೇಳಿಕೆ ಜನಪ್ರಿಯವಾಗಲಿದೆ. ಮುಂದೊಂದು ದಿನ ಜಗತ್ತಿಗೇ ಆಹಾರ ಒದಗಿಸುವ ದೇಶವೆಂದರೆ ಭಾರತ ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ ಎಂದು ಹೇಳಿದರು.
ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಎಸ್.ಎನ್.ವಾಸುದೇವನ್, ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಪತಿ ವಿಷ್ಣುವರ್ಧನ ಮಾತನಾಡಿದರು.
ಕುಲಸಚಿವ ಜನಾರ್ಧನ ಜಿ, ವಿವಿಯ ಪ್ರಗತಿ ವಿವರಿಸಿದರು. ವ್ಯವಸ್ಥಾಪನಾ ಮಂಡಳಿಯ ಸದಸ್ಯ ಮಹಾಂತೇಶಗೌಡ ಪಾಟೀಲ, ಸಂಶೋಧನಾ ನಿರ್ದೇಶಕ ಬಿ.ಪ್ರಕ್ರುದ್ದೀನ್, ಶಿಕ್ಷಣ ನಿರ್ದೇಶಕ ಎನ್.ಕೆ.ಹೆಗಡೆ, ಸ್ನಾತಕೋತ್ತರ ಡೀನ್ ತಮ್ಮಯ್ಯ ಎನ್, ವಿದ್ಯಾರ್ಥಿ ಕಲ್ಯಾಣದ ಡೀನ್ ರಾಮಚಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.