ಮಹಾಲಿಂಗಪುರ: ‘ವೈದ್ಯರ ಮೇಲೆ ಜನರು ಇಟ್ಟಿರುವ ವಿಶ್ವಾಸ, ಪ್ರೀತಿಯನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ವೆಂಕಟೇಶ ಆಸ್ಪತ್ರೆ ಮಾಡುತ್ತಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ವೆಂಕಟೇಶ ಆಸ್ಪತ್ರೆಯಲ್ಲಿ ಭಾನುವಾರ ನಾರಾಯಣ ಹೆಲ್ತ್ ಸಹಯೋಗಲ್ಲಿ ಹಮ್ಮಿಕೊಂಡ ಹೃದಯ ರೋಗ ಚಿಕಿತ್ಸೆ ಸೇವೆ ಹಾಗೂ ಡಾ.ವಿ.ಪಿ.ಕನಕರಡ್ಡಿ ಮೆಮೊರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಉದ್ಘಾಟನಾ ಸಮಾರಂಭದಲ್ಲಿ ಕಾರ್ಡಿಯೋ ಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ಆಪರೇಷನ್ ಥಿಯೆಟರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ವೈದ್ಯರು ಹೆಚ್ಚಿನ ಕಾಳಜಿ ವಹಿಸಿದರೆ ರೋಗಿಗಳು ಅರ್ಧದಷ್ಟು ಗುಣಮುಖರಾಗುತ್ತಾರೆ. ಗ್ರಾಮೀಣ ಭಾಗದ ಇಂತಹ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೆಚ್ಚಿನ ಕಾಳಜಿ ದೊರಕುತ್ತದೆ. ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ನೀಡಲು ಮುಂದಾಗಿರುವ ವೆಂಕಟೇಶ ಆಸ್ಪತ್ರೆ ಗ್ರಾಮೀಣ ಜನರ ಜೀವನಾಡಿ’ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ‘ಗ್ರಾಮೀಣ ಭಾಗದಿಂದ ದೂರದ ಪಟ್ಟಣಗಳಿಗೆ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆದೊಯ್ದರೆ ಬದುಕುವುದು ದುಸ್ತರವಾಗಿದೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಜನರಿಗೆ ತುರ್ತು ಚಿಕಿತ್ಸೆ ನೀಡಲು ವೆಂಕಟೇಶ ಆಸ್ಪತ್ರೆ ಮುಂದಾಗಿರುವುದು ಶ್ಲಾಘನೀಯ’ ಎಂದರು.
ಡಾ.ವಿ.ಪಿ.ಕನಕರಡ್ಡಿ ಮೆಮೊರಿಯಲ್ ಕಾಲೇಜ್ ಆಫ್ ನರ್ಸಿಂಗ್ ಉದ್ಘಾಟಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ನರ್ಸಿಂಗ್ ಕ್ಷೇತ್ರಕ್ಕೆ ಅಪಾರ ಬೇಡಿಕೆ ಇದೆ. ಪ್ರಮುಖವಾಗಿ ನರ್ಸಿಂಗ್ ಕಾಲೇಜ್‍ಗೆ ಆಸ್ಪತ್ರೆ ಜೋಡಣೆ ಇರಬೇಕು. ಇಂತಹ ಸೌಲಭ್ಯವನ್ನು ಇಲ್ಲಿನ ನರ್ಸಿಂಗ್ ಕಾಲೇಜ್ ಹೊಂದಿರುವುದು ಆಶಾದಾಯಕ ಬೆಳವಣಿಗೆ’ ಎಂದರು.
ಕಾರ್ಡಿಯಾಕ್ ಕ್ಯಾಥ್‌ಲ್ಯಾಬ್ ಅನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು. ಮಹಾಲಿಂಗೇಶ್ವರ ಸಂಸ್ಥಾನಮಠದ ಮಹಾಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ವಿಠ್ಠಲ ಬಾಗಿ ಮಾತನಾಡಿದರು. ಶಾಸಕರಾದ ಜೆ.ಟಿ. ಪಾಟೀಲ, ಸಿದ್ದು ಸವದಿ, ಹುಬ್ಬಳ್ಳಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಸುರೇಶ ದುಗ್ಗಾಣಿ, ಬಾಗಲಕೋಟೆಯ ಶಾಂತಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಆರ್.ಟಿ. ಪಾಟೀಲ, ಧಾರವಾಡದ ನಾರಾಯಣ ಹೆಲ್ತ್‌ನ ಸೀನಿಯರ್ ಕನ್ಸಲ್ಟಂಟ್ ಮತ್ತು ಚೀಫ್ ಕಾರ್ಡಿಯೋ ಥೋರಾಸಿಕ್ ಸರ್ಜನ್ ಡಾ.ರವಿವರ್ಮ ಪಾಟೀಲ, ಡಾ.ಎಲ್.ಬಿ.ನಾಯಕ್, ಆಸ್ಪತ್ರೆಯ ಚೇರಮನ್ ಡಾ.ಅಜಿತ್ ಕನಕರಡ್ಡಿ, ವ್ಯವಸ್ಥಾಪಕ ನಿರ್ದೇಶಕಿ ಡಾ.ಶರ್ವಾಣಿ ಕನಕರಡ್ಡಿ, ವೆಂಕಟೇಶ ಅಜಿತ್ ಕನಕರಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.