ADVERTISEMENT

ಹುನಗುಂದ: ಸಕಲ ಸೌಲಭ್ಯದ ಸರ್ಕಾರಿ ಕಾಲೇಜು

ಸಂಗಮೇಶ ಹೂಗಾರ
Published 31 ಜುಲೈ 2025, 2:19 IST
Last Updated 31 ಜುಲೈ 2025, 2:19 IST
   

ಹುನಗುಂದ: ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಮೂಲ ಸೌಕರ್ಯಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿರಾರು ಮಕ್ಕಳು ಓದುತ್ತಿರುವುದು ವಿಶೇಷ.

2007ರಲ್ಲಿ ಟಿಸಿಎಚ್ ಕಾಲೇಜು ಕಟ್ಟಡದಲ್ಲಿ 37 ವಿದ್ಯಾರ್ಥಿಗಳೊಂದಿಗೆ ಬಿ.ಎ. ತರಗತಿ ಆರಂಭದೊಂದಿಗೆ ಕಾಲೇಜು ಪ್ರಾರಂಭವಾಗಿತ್ತು. ಈಗ ಸ್ವಂತ, ಸುಸಜ್ಜಿತ ಕಟ್ಟಡದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಲೇಜಿನಲ್ಲಿ ಪ್ರಸ್ತುತ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾಲೇಜಿನಲ್ಲಿ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಎಸ್ಸಿ ಕೋರ್ಸ್‌ಗಳು ಲಭ್ಯ ಇವೆ.

ಸ್ಥಳೀಯರು ಮಾತ್ರವೇ ಅಲ್ಲದೆ ಹತ್ತಿರದ ಇಳಕಲ್, ಲಿಂಗಸುಗೂರು, ಕುಷ್ಟಗಿ, ಮುದ್ದೇಬಿಹಾಳ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳೂ ಈ ಕಾಲೇಜಿಗೆ ಬರುತ್ತಾರೆ.

ADVERTISEMENT

ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತಮ ಅವಕಾಶ ಒದಗಿಸಲಾಗಿದೆ. ಎರಡು ಎನ್.ಎಸ್.ಎಸ್ ಘಟಕಗಳು, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಕ್ರಿಯಾಶೀಲವಾಗಿದ್ದು, ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎನ್‌ಸಿಸಿ ತರಬೇತಿ ಪಡೆದ ಎಂಟು ವಿದ್ಯಾರ್ಥಿಗಳು ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿರುವುದು ಕಾಲೇಜಿನ ಹೆಮ್ಮೆ.

ಉತ್ತಮ ಸೌಕರ್ಯ: ಕಾಲೇಜು ಎರಡು ಎಕರೆ ಜಾಗದಲ್ಲಿದ್ದು, ಆವರಣವು ಹಸಿರಿನಿಂದ ಕಂಗೊಳಿಸುತ್ತಿದೆ.

ಒಟ್ಟು ಕಟ್ಟಡಗಳಲ್ಲಿ, ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಪ್ರಾಂಶುಪಾಲರ ಕೊಠಡಿ, ಐಕ್ಯುಎಸಿ ಕಚೇರಿ, ಆಡಿಟೋರಿಯಂ, ಗ್ರಂಥಾಲಯ, ಜಿಮ್, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಪ್ರಯೋಗಾಲಯಗಳು, ಮಹಿಳಾ ಕೊಠಡಿ ಇವೆ. 40 ತರಗತಿ ಕೊಠಡಿಗಳನ್ನು ಒಳಗೊಂಡಿದೆ. ವಿಶೇಷ ಚೇತನರಿಗಾಗಿ ಪ್ರತ್ಯೇಕ ಶೌಚಾಲಯವಿದೆ. ಆರಂಭದ ವರ್ಷಗಳಲ್ಲಿ ಕೊಠಡಿ ಸಮಸ್ಯೆಯಾಗಿ ಮರದ ಕೆಳಗಡೆ ಬೋಧನೆ ಮಾಡಿದ್ದಿದೆ.

16 ಜನ ಅಧ್ಯಾಪಕರು, 36 ಅತಿಥಿ ಉಪನ್ಯಾಸಕರು ಹಾಗೂ 9 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ 2024-25ನೇ ಸಾಲಿನ ಯುಜಿಸಿ ನ್ಯಾಕ್ ಸಮಿತಿಯಿಂದ ಬಿ+ ಮಾನ್ಯತೆ ಸಿಕ್ಕಿದೆ.

ಬೃಹತ್ ಕ್ಯಾಂಪಸ್

ಪ್ರಥಮ ದರ್ಜೆ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟಾರೆ 2,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.