
ಜನ್ಮ ದಿನ ಸಂದರ್ಭದಲ್ಲಿ ಲಂಬಾಣಿ ಮಹಿಳೆಯೊಂದಿಗೆ ಎಚ್.ವೈ. ಮೇಟಿ
(ಸಂಗ್ರಹ ಚಿತ್ರ)
ಬಾಗಲಕೋಟೆ: ಶಾಸಕ ಎಚ್.ವೈ. ಮೇಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಸ್ವ-ಗ್ರಾಮ ತಿಮ್ಮಾಪುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇಟಿಯವರ ಪಾರ್ಥೀರ ಶರೀರದ ಅಂತಿಮ ದರ್ಶನದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಬೆಳಗಿನ ಜಾವ ಮೇಟಿಯವರ ಪಾರ್ಥೀವ ಶರೀರ ಬಾಗಲಕೋಟೆಗೆ ತರಲಿದ್ದು, ಬೆಳಿಗ್ಗೆ 6 ರಿಂದ 9.30ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದರು.
ಬಾಗಲಕೋಟೆಯಿಂದ ತಿಮ್ಮಾಪುರವರೆಗೆ ತೆರೆದ ವಾಹನದಲ್ಲಿ ಮೇಟಿ ಅವರ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುವುದು. ಗ್ರಾಮದಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನ 2 ಗಂಟೆಗೆ ನಡೆಯುವ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕ್ರೀಡಾಂಗಣದ ಪೂರ್ವ ದಿಕ್ಕಿನ ನೈರುತ್ಯ ಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶ ದ್ವಾರವಿದ್ದು, ದರ್ಶನ ಪಡೆದ ನಂತರ ಅದೇ ಭಾಗದ ಇನ್ನೊಂದೆಡೆ ಇರುವ ಗೇಟಿನಿಂದ ಹೊರ ಹೋಗಬೇಕು. ಕ್ರೀಡಾಂಗಣದ ಮುಖ್ಯ ದ್ವಾರದಲ್ಲಿ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.