
ಬೆಂಗಳೂರಿನಲ್ಲಿ ಸಚಿವ ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಚ್.ವೈ. ಮೇಟಿ
(ಸಂಗ್ರಹ ಚಿತ್ರ)
ಬಾಗಲಕೋಟೆ: ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಓದಿಲ್ಲದೇ ರಾಜಕೀಯ ಪಯಣ ಆರಂಭಿಸಿದ ಎಚ್.ವೈ. ಮೇಟಿ ಅವರು, ವಿಧಾನಸೌಧವಲ್ಲದೇ ದೆಹಲಿಯ ಪಾರ್ಲಿಮೆಂಟ್ ಅನ್ನೂ ಪ್ರವೇಶಿಸಿದ್ದರು.
ಐದು ದಶಕಗಳ ಕಾಲ ರಾಜಕೀಯದ ವಿವಿಧ ಮೆಟ್ಟಿಲುಗಳನ್ನು ಏರಿದ್ದರು. ಸಂಸದರಾಗಿ ದೆಹಲಿಗೂ ಹೋಗಿದ್ದರು. ಆದರೆ ಜನ್ಮ ಸ್ಥಳವಾದ ‘ತಿಮ್ಮಾಪುರ’ ಅನ್ನು ಅವರು ಮರೆತಿರಲಿಲ್ಲ. ಜಿಲ್ಲೆಗೆ ಬಂದರೆ ನೇರವಾಗಿ ಅವರ ವಾಹನ ತಿಮ್ಮಾಪುರದ ಮನೆಗೆ ಹೋಗುತ್ತಿತ್ತು. ಅಲ್ಲಿಂದಲೇ ಕ್ಷೇತ್ರ, ಜಿಲ್ಲೆಯನ್ನು ಸುತ್ತುತ್ತಿದ್ದರು.
ಬಿಲ್ ಕೆರೂರ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ, ಬಿಡಿಸಿಸಿ ನಿರ್ದೇಶಕರಾಗುವ ಮೂಲಕ ಸಹಕಾರ ರಂಗದಲ್ಲಿಯೂ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದರು.
ಜನತಾ ಪರಿವಾರದ ನಾಯಕ: 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವಲ್ಲಿ ಅವರ ರಾಜಕೀಯ ಗುರು, ಶಾಸಕ ಜಿ.ವಿ. ಮಂಟೂರ ಅವರ ಪಾತ್ರ ದೊಡ್ಡದಾಗಿತ್ತು. ರಾಮಕೃಷ್ಣ ಹೆಗಡೆ ಅವರ ಮನವೊಲಿಸುವ ಮೂಲಕ ಮಂಟೂರ ಅವರು, ತಮ್ಮ ಶಿಷ್ಯನಿಗೆ ವಿಧಾನಸೌಧದ ಮೆಟ್ಟಿಲು ಏರಿಲು ಅವಕಾಶ ಮಾಡಿಕೊಟ್ಟಿದ್ದರು.
ಮುಂದೆ ಲೋಕಸಭೆಗೂ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಲೋಕಸಭಾ ಸದಸ್ಯರೂ ಆಗಿದ್ದರು.
ಸಿದ್ಧರಾಮಯ್ಯನವರ ಕಟ್ಟಾ ಅನುಯಾಯಿ: ರಾಜಕಾರಣದಲ್ಲಿ ದಿನಕ್ಕೊಬ್ಬ ನಾಯಕರ ಜೊತೆ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಎಚ್.ವೈ. ಮೇಟಿ ಅವರು ಮಾತ್ರ ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಯಾಗಿದ್ದರು. ಜನತಾ ದಳ, ಜನತಾ ಪಕ್ಷ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯ ಪಯಣ ಮುಂದುವರೆಸಿದ್ದರು.
ಎಲ್ಲಿಯೇ ಹೋಗಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಕಾಳು ಪಲ್ಲೆ, ಮೊಸರು ಅವರ ಮೊದಲ ಆಯ್ಕೆಯಾಗಿರುತ್ತಿತ್ತು. ದೆಹಲಿಗೂ ತಮ್ಮ ಜೊತೆ ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದನ್ನು ಹಲವು ಕಡೆ ಸ್ಮರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.