ಗುಳೇದಗುಡ್ಡ: ಪ್ರತಿ ವರ್ಷ ಆ. 15ರಂದು ಸ್ವಾತಂತ್ರ್ಯ ಯೋಧ ಸಾಬಣ್ಣ ಶಿಂಧೆ ಅವರ ಮನೆಯ ಎದುರು ಧ್ವಜಾರೋಹಣ ನಡೆಯುತ್ತದೆ. ಅಂದು ಬೆಳಿಗ್ಗೆ 7ಕ್ಕೆ ಗಣ್ಯರು ಬಂದು ಧ್ವಜಾರೋಹಣ ಮಾಡುತ್ತಾರೆ. ಓಣಿಯ ಹಿರಿ-ಕಿರಿಯರೆಲ್ಲ ಪಾಲ್ಗೊಳ್ಳುತ್ತಾರೆ. ಅವರ ಮನೆಯ ಎದುರು ಇದು 78 ನೇ ಧ್ವಜಾರೋಹಣ.
ಸಾಬಣ್ಣ ಇಂದು ಜೀವಂತ ಇಲ್ಲ. ಸ್ವಾತಂತ್ರ್ಯ ಸಿಕ್ಕ ದಿನದಿಂದ ಅವರು ನಡೆಸಿಕೊಂಡು ಬಂದ ಧ್ವಜಾರೋಹಣ ಕಾರ್ಯಕ್ರಮ ಇನ್ನೂ ನಿಂತಿಲ್ಲ. ಅವರ ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು 1986 ರಲ್ಲಿ ಮರಣ ಹೊಂದಿ 37 ವರ್ಷಗಳು ಗತಿಸಿವೆ. ಇಂದಿಗೂ ಧ್ವಜಾರೋಹಣದ ಮುಂದುವರಿಸಿಕೊಂಡು ಬರಲಾಗುತ್ತಿದೆ.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಾಬಣ್ಣ ಪಾಲ್ಗೊಂಡಿದ್ದರು. ಬ್ರಿಟಿಷರ ಕಣ್ಣು ತಪ್ಪಿಸಿ ಕೆಲವು ಸಲ ಮಹಿಳೆಯರ ವೇಷ ಧರಿಸಿ ತಿರುಗಾಡುತ್ತ ಅವರ ವಿರುದ್ಧದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ದೂರವಾಣಿ ತಂತಿ ಕಟ್ ಮಾಡಿದ್ದು, ರೈಲು ಹಳಿ ಕಿತ್ತಿದ್ದು, ಅಂಚೆ ಪೆಟ್ಟಿಗೆ ನಾಶ ಮಾಡಿದ ಪ್ರಸಂಗಗಳು ಬ್ರಿಟಿಷರನ್ನು ನಿದ್ದೆಗೆಡಿಸುವಂತೆ ಮಾಡಿದ್ದವು. ಸ್ವಾತಂತ್ರ್ಯಾ ನಂತರ ಸಾಬಣ್ಣ ಅವರು ಸರ್ಕಾರ ನೀಡುತ್ತಿದ್ದ ಮಾಸಾಶನವನ್ನು ಸರ್ಕಾರಕ್ಕೇ ಮರಳಿಸಿದ್ದು ಅವರ ದೇಶಪ್ರೇಮದ ಪ್ರತೀಕ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಈ ವರ್ಷ ಸಾಬಣ್ಣ ಅವರ ಮನೆಯ ಎದುರು ಬೆಳಿಗ್ಗೆ 7ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾಬಣ್ಣ ಶಿಂಧೆ ಅವರ ಮೊಮ್ಮಕ್ಕಳು, ಓಣಿಯ ಹಿರಿಯರು ಹಾಗೂ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.