
ರಬಕವಿ ಬನಹಟ್ಟಿ: ‘ಇದೇ ಬೇಸಿಗೆಯಲ್ಲಿ ಹಿಪ್ಪರಗಿ ಬ್ಯಾರೇಜ್‌ಗೆ ಹೊಸ ಗೇಟ್ ಅಳವಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕು. ಇಲ್ಲದಿದ್ದರೆ ನದಿ ತೀರದ ರೈತ ಮತ್ತು ಜನರನ್ನು ಕರೆದುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದರು.
ಹಿಪ್ಪರಗಿ ಬ್ಯಾರೇಜ್‌ನ ಗೇಟ್‌ನಲ್ಲಿ ಉಂಟಾದ ಸಮಸ್ಯೆಯನ್ನು ಬುಧವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅಧಿಕಾರಿಗಳ ನಿರ್ಲಕ್ಷವೇ ಸಮಸ್ಯೆಗೆ ಕಾರಣ. 2024ರಲ್ಲಿ ಗೇಟ್ ದುರಸ್ತಿ ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಪ್ರತಿ ಹದಿನೈದು ವರ್ಷಗಳಿಗೆ ಒಮ್ಮೆ ಗೇಟ್ ಬದಲಾವಣೆ ಮಾಡಬೇಕು. ಆದರೆ ಬ್ಯಾರೇಜ್ ನಿರ್ಮಾಣವಾಗಿ 25 ವರ್ಷ ಗತಿಸಿದರೂ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 2024ರಲ್ಲಿಯೇ ಈ ಕುರಿತು ಸರ್ಕಾರ ಮತ್ತು ಇಲಾಖೆಗೆ ತಿಳಿಸಲಾಗಿತ್ತು’ ಎಂದು ಅವರು ಗಮನ ಸೆಳೆದರು.
‘10 ಎಂ.ಎಂ. ಸಾಮರ್ಥ್ಯದ ಗೇಟ್‌ಗಳು ಈಗ ಕೇವಲ 5 ಎಂ.ಎಂ.ಗೆ ಬಂದು ತಲುಪಿವೆ. 1 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ಗುರುವಾರದೊಳಗಾಗಿ ದುರಸ್ತಿಯಾಗದಿದ್ದರೆ 2 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಹರಿದು ಹೋಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಶ‍್ರೀಶೈಲ ಬೀಳಗಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಪುಂಡಲೀಕ ಪಾಲಭಾವಿ ಇದ್ದರು.
‘ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಇರುವುದರಿಂದ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಬ್ಯಾರೇಜ್‌ನಲ್ಲಿಯ ನೀರಿನ ಮಟ್ಟವು 1.2 ಮೀಟರ್ ಕಡಿಮೆಯಾಗಿದೆ’ ಎಂದು ಬ್ಯಾರೇಜ್ ಮೂಲಗಳು ತಿಳಿಸಿವೆ. ಬ್ಯಾರೇಜ್ ಸಹಾಯಕ ಎಂಜಿನಿಯರ್ ಶಿವಮೂರ್ತಿ ಅವರು ಕರೆ ಸ್ವೀಕರಿಸಲಿಲ್ಲ.
ಇಷ್ಟೊಂದು ತೊಂದರೆಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ತುಂಗಭದ್ರಾ ಜಲಾಶಯಕ್ಕೆ ತೋರಿದ ಕಾಳಜಿಯನ್ನು ಸರ್ಕಾರ ಹಿಪ್ಪರಗಿ ಬ್ಯಾರೇಜಿಗೆ ಯಾಕೆ ತೋರುತ್ತಿಲ್ಲಸಿದ್ದು ಸವದಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.