ADVERTISEMENT

ಒಳಮೀಸಲಾತಿ: ತರಾತುರಿಯಲ್ಲಿ ಜಾರಿಗೊಳಿಸಬೇಡಿ; ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕೇಂದ್ರದ ಜಾತಿ ಗಣತಿ ವರದಿಯೂ ಬರಲಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 23:06 IST
Last Updated 6 ಆಗಸ್ಟ್ 2025, 23:06 IST
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ   

ಬಾಗಲಕೋಟೆ: ‘ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗದ ವರದಿಯನ್ನು ಸರ್ಕಾರ ಯಾರದ್ದೇ ಮುಲಾಜು, ಒತ್ತಡಕ್ಕೆ ಒಳಗಾಗಿ ತರಾತುರಿಯಲ್ಲಿ ಜಾರಿಗೊಳಿಸಬಾರದು’ ಎಂದು ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬುಧವಾರ ಆಗ್ರಹಿಸಿದರು.

‘ಸರ್ಕಾರ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ತಕರಾರು, ಆಕ್ಷೇಪಗಳಿದ್ದರೆ, ಪರಿಗಣಿಸಿ ವಿಶೇಷ ಅಧಿವೇಶನ ನಡೆಸಬೇಕು. 224 ಶಾಸಕರ ಅಭಿಪ್ರಾಯ ಸಂಗ್ರಹಿಸಿ ಯಾರಿಗೂ ತೊಂದರೆ ಆಗದಂತೆ ತೀರ್ಮಾನಿಸಬೇಕು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘2011ರಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 1.08 ಕೋಟಿ ಇತ್ತು. ಆಯೋಗದ ಈಗಿನ ಸಮೀಕ್ಷೆಯಲ್ಲಿ 1.07 ಕೋಟಿ ಎಂದಿದೆ. 14 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಕಡಿಮೆಯಾಯಿತೇ? ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳಿಗೆ ಶೇ 4.5 ಮೀಸಲಾತಿ ನೀಡಿತ್ತು. ಈಗ ಶೇ 4 ಎಂಬ ಮಾಹಿತಿ ಇದೆ. ಹೇಗೆ ಒಪ್ಪಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ. ಅದರ ವರದಿ ಬಂದ ಬಳಿಕ ಎರಡನ್ನೂ ಪರಾಮರ್ಶಿಸಿ, ಸರಿಯಾದ ಅಂಕಿ–ಅಂಶಗಳೊಂದಿಗೆ ಒಳ ಮೀಸಲಾತಿ ಜಾರಿಗೊಳಿಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿ ಮಾನದಂಡದ ಮೇಲೆಯೇ ಮೀಸಲಾತಿ ನಿಗದಿಯಾಗಬೇಕು’ ಎಂದು ಆಗ್ರಹಿಸಿದರು.

‘ಹಿಂದಿನ ಸರ್ಕಾರ ವೈಜ್ಞಾನಿಕವಾಗಿ ಚಿಂತಿಸದೇ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿಗೆ ಮುಂದಾಗಿತ್ತು. ಅದರ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತವಾಯಿತು. ಹೊಸ ಸರ್ಕಾರಕ್ಕೆ ಶಕ್ತಿ ತುಂಬಿದ ಸಮುದಾಯಗಳ ಶಕ್ತಿ ಕುಂದಿಸಬಾರದು, ರಕ್ಷಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.