ರಬಕವಿ ಬನಹಟ್ಟಿ (ಬಾಗಲಕೋಟೆ): ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ 124 ದಿನದ ಹಿಂದೆ ಸಲ್ಲೇಖನ ವ್ರತ ಕೈಗೊಂಡು, ಸೋಮವಾರ ದೇಹತ್ಯಾಗ ಮಾಡಿದ ಜೈನ ಸನ್ಯಾಸಿನಿ ಆರಿಕಾ ದರ್ಶನಭೂಷಣಮತಿ ಮಾತಾಜಿ (103) ಅಂತ್ಯಕ್ರಿಯೆ ಮಂಗಳವಾರ ಜರುಗಿತು.
ಬೆಳಿಗ್ಗೆ 9 ಗಂಟೆಗೆ ಭದ್ರಗಿರಿಬೆಟ್ಟ ಪ್ರದೇಶದಲ್ಲಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜೈನ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಿತು.
‘ಶನಿವಾರ ಅವರ ಉಸಿರಾಟದಲ್ಲಿ ತೊಂದರೆಯಾಗಿತ್ತು. ಭಾನುವಾರ ಕುಲರತ್ನಭೂಷಣ ಮಹಾರಾಜರಿಂದ ಯಮ ಸಲ್ಲೇಖನ ವ್ರತ ಸ್ವೀಕರಿಸಿದರು. ಸೋಮವಾರ ಕುಲರತ್ನಭೂಷಣ ಮಹಾರಾಜರಿಂದ ಉಪದೇಶ ಆಲಿಸುತ್ತ, ಭಕ್ತರ ಸಮ್ಮುಖದಲ್ಲಿ ದೇಹತ್ಯಾಗ ಮಾಡಿದರು.
ನೂರಾರು ಮಂದಿ ಶ್ರಾವಕ ಮತ್ತು ಶ್ರಾವಕಿಯರು, ಜನಪ್ರತಿನಿಧಿಗಳು, ರಬಕವಿ ಬನಹಟ್ಟಿ, ಹಳಿಂಗಳಿ, ಮದನಮಟ್ಟಿ, ತಮದಡ್ಡಿ, ತೇರದಾಳ ಸೇರಿದಂತೆ ಸುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜೈನ ಧರ್ಮೀಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.