ADVERTISEMENT

ಜಮಖಂಡಿ | ಗಬ್ಬೆದ್ದು ನಾರುತ್ತಿದೆ ಬಸ್ ನಿಲ್ದಾಣ

ಬಸ್‌ ನಿಲ್ದಾಣ ಅಭಿವೃದ್ಧಿಗೆ ಅನುದಾನ ಮಂಜೂರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:46 IST
Last Updated 18 ಜುಲೈ 2025, 2:46 IST
ಜಮಖಂಡಿ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಗಬ್ಬೆದ್ದು ನಾರುತ್ತಿದೆ
ಜಮಖಂಡಿ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಗಬ್ಬೆದ್ದು ನಾರುತ್ತಿದೆ   

ಜಮಖಂಡಿ: ನಗರದ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದೆ. ಎಲ್ಲಿ ನೋಡಿದರೂ ಕಸಕಡ್ಡಿ ಬಿದ್ದಿದೆ. ಆವರಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ.

ಇನ್ನು ಬಸ್ ನಿಲ್ದಾಣದ ಅಭಿವೃದ್ಧಿಗೆ  ₹ 4 ಕೋಟಿ ಹಾಗೂ ಬಸ್ ನಿಲ್ದಾಣದ ಘಟಕದ ಅಭಿವೃದ್ಧಿಗೆ ₹ 1 ಕೋಟಿಯಿಂದ ₹ 2ಕೋಟಿ ಅವಶ್ಯಕತೆ ಇದೆ. ಅದನ್ನು ಸರ್ಕಾರ ಮುಂಜೂರು ಮಾಡಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.

ಸಮಸ್ಯೆಗಳ ಆಗರ: ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆವರಣದಲ್ಲಿ ಡಾಂಬರೀಕರಣ ಅಥವಾ ಕಾಂಕ್ರೀಟ್ ಅಳವಡಿಕೆ ಮಾಡಬೇಕಿದೆ. ಬಸ್‌ಗಳು ಒಳಬರಲು ಮತ್ತು ಹೋಗಲು ಸೂಕ್ತ ರಸ್ತೆ ವ್ಯವಸ್ಥೆ ಆಗಬೇಕಿದೆ. ಗಬ್ಬೆದ್ದು ನಾರುತ್ತಿರುವ ಶೌಚಾಲಯ ಸೇರಿದಂತೆ ಪ್ರಮುಖ ಮೂಲ ಸೌಕರ್ಯಗಳ ವ್ಯವಸ್ಥೆ ಆಗಬೇಕಿದೆ.

ADVERTISEMENT

ನಿರ್ವಹಣೆಯ ಕೊರತೆಯಿಂದ ಬಸ್‌ ನಿಲ್ದಾಣ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಕುಡುಕರ ವಾಸಸ್ಥಾನವಾಗುತ್ತದೆ.

ಧಾರವಾಡ, ಬಾಗಲಕೋಟೆಯಿಂದ ಬರುವ ಬಸ್‌ಗಳು ರಾತ್ರಿ ಬೈಪಾಸ್‌ನಿಂದ ಬರುವುದರಿಂದ ಟಿಪ್ಪು ಸುಲ್ತಾನ್‌ ವೃತ್ತ, ಬಸವೇಶ್ವರ ವೃತ್ತ, ಆಲಗೂರ ನಾಕಾಗೆ ಬಸ್ ನಿಲ್ದಾಣದಿಂದ ಹೋಗುವುದಕ್ಕೆ ಎರಡು ಕಿ.ಮೀ ಆಗುತ್ತದೆ. ರಾತ್ರಿ ಸಮಯದಲ್ಲಿ ಪರದಾಡುವ ಸ್ಥಿತಿ ಇದೆ. ನಗರಕ್ಕೆ ಬರುವ ವೃದ್ಧರು, ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿಯರು ಬಸ್ ಹಿಡಿಯಲು ಕಷ್ಟ ಪಡುತ್ತಿದ್ದಾರೆ.

ಪೋಸ್ಟರ್, ಫ್ಲೆಕ್ಸ್ ಹಾವಳಿ: ಬಹುತೇಕ ಬಸ್ ನಿಲ್ದಾಣಗಳಲ್ಲಿ ಒಳ ಆವರಣದಲ್ಲಿ ಜಾಹೀರಾತು ಪೋಸ್ಟರ್‌ಗಳು, ಹೊರಭಾಗದಲ್ಲಿ ಅನಧಿಕೃತ ಫ್ಲೆಕ್ಸ್‌ಗಳು ತುಂಬಿ ತುಳುಕುತ್ತಿವೆ. ಇವುಗಳನ್ನು ತಿನ್ನಲು ಜಾನುವಾರು ನಿಲ್ದಾಣದೊಳಗೆ ನುಗ್ಗುತ್ತಿರುವುದರಿಂದ ಚಿಕ್ಕಮಕ್ಕಳು, ಹಿರಿಯ ನಾಗರಿಕರು ಆತಂಕ ಎದುರಿಸುವ ಸ್ಥಿತಿ ಇದೆ. ಕೆಲವೆಡೆ ಅಸಹ್ಯಕರ ಪೋಸ್ಟರ್ ಅಂಟಿಸಿರುತ್ತಾರೆ.

‘ಬಸ್ ತಂಗುದಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಎಲ್ಲೆಂದರಲ್ಲಿ ಎಲೆ ಅಡಿಕೆ, ಗುಟ್ಕಾ ತಿಂದು ಉಗುಳಿರುವುದರಿಂದ ಗಲೀಜಾಗಿದೆ. ನಗರಸಭೆ ಕಾರ್ಮಿಕರು ನೆನಪಾದಾಗಷ್ಟೇ ಕಸಗುಡಿಸುತ್ತಾರೆ. ಅಷ್ಟು ಬಿಟ್ಟರೆ ನಿರ್ವಹಣೆ ಯಾರಿಗೆ ಸೇರಿದೆ ಎಂಬುದೇ ಗೊತ್ತಿಲ್ಲ. ಈ ನಿಲ್ದಾಣದಿಂದ ಎಷ್ಟು ಹೊತ್ತಿಗೆ ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಬಸ್‌ಗಳು ಇವೆ ಎಂಬುದನ್ನು ತಿಳಿದುಕೊಳ್ಳುವುದೇ ಕಷ್ಟವಾಗಿದೆ. ಎಲ್ಲಿಯೂ ಬಸ್‌ಗಳ ವೇಳಾಪಟ್ಟಿ ಪ್ರಕಟಿಸಿಲ್ಲ, ವೇಳಾಪಟ್ಟಿಯನ್ನು ಪ್ರಕಟಿಸಬೇಕು. ನಿಲ್ದಾಣದಲ್ಲಿ ರಾತ್ರಿ ಕಾವಲುಗಾರರನ್ನು ನೇಮಕ ಮಾಡಬೇಕು. ಸ್ವಚ್ಚತೆಗೆ ಅಧಿಕಾರಿಗಳು ಒತ್ತು ನೀಡಬೇಕು’ ಎಂದು ರಾಜು ಮಸಳಿ ಒತ್ತಾಯಿಸಿದರು.

ಜಮಖಂಡಿ ನಗರದ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಹೋಗಲೂ ಬಾರದಂತಿದೆ
ಜಮಖಂಡಿ ನಗರದ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿದೆ

- ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆ ಮಾಡುವ ಗುತ್ತಿಗೆದಾರರನ್ನು ಬದಲಾವಣೆ ಮಾಡಲಾಗಿದೆ

- ಎಸ್.ಬಿ. ಗಸ್ತಿ ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.