ADVERTISEMENT

ಜಮಖಂಡಿ: ಗಬ್ಬೆದ್ದು ನಾರುತ್ತಿದೆ ನ್ಯಾಯಾಲಯದ ಸಾರ್ವಜನಿಕ ಶೌಚಾಲಯ

ಆರ್.ಎಸ್.ಹೊನಗೌಡ
Published 19 ಡಿಸೆಂಬರ್ 2025, 4:11 IST
Last Updated 19 ಡಿಸೆಂಬರ್ 2025, 4:11 IST
<div class="paragraphs"><p>ಜಮಖಂಡಿ ನ್ಯಾಯಾಲಯದ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ</p></div>

ಜಮಖಂಡಿ ನ್ಯಾಯಾಲಯದ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ

   

ಜಮಖಂಡಿ: ಇದು ನ್ಯಾಯವನ್ನು ಹುಡುಕಿಕೊಂಡು ಬಂದ ಎಷ್ಟೊ ಜನರಿಗೆ ನ್ಯಾಯ ನೀಡುವ ದೇವಾಲಯ, ಇಲ್ಲಿ ಶ್ರೀಮಂತ, ಬಡವ, ಬಲ್ಲಿದ, ಕೇಳವರ್ಗದವ ಮೇಲ್ವರ್ಗದವ ಎಂಬ ಬೇಧ ಭಾವ ಇಲ್ಲ, ನ್ಯಾಯ ಹುಡುಕಿ ಬಂದವರಿಗಾಗಿಯೇ ಇರುವ ಈ ನ್ಯಾಯಾಲಯದಲ್ಲಿ ಶೌಚಾಲಯದ ಸ್ಥಿತಿ ಹಾಗೂ ಸ್ವಚ್ಚತೆ ಮರಿಚಿಕೆ ನೋಡಿದರೆ ನ್ಯಾಯದೇವತೆ ಕಣ್ಣು ತೆರೆಯಬೇಕಾಗಿದೆ.

ಇಲ್ಲಿ ಜಿಲ್ಲಾ ನ್ಯಾಯಾಲಯ ಸೇರಿ ಏಳು ಕೋರ್ಟ್ ಗಳು ಕಾರ್ಯನಿರ್ವಹಿಸುತ್ತವೆ, 500 ಕ್ಕೂ ಅಧಿಕ ವಕೀಲರ ಸಂಘವಿರುವ ಈ ನ್ಯಾಯಾಲಯಕ್ಕೆ ಪ್ರತಿನಿತ್ಯ ಮಹಿಳೆಯರು, ಮಕ್ಕಳು, ಹಿರಿಯನಾಗರಿಕರು ಸೇರಿದಂತೆ ಸಾವಿರಾರು ಜನರು ನ್ಯಾಯಕ್ಕಾಗಿ ಬರುತ್ತಾರೆ ಆದರೆ ಇಲ್ಲಿ ಮೂಲಭೂತ ಸೌಕರ್ಯದ ಕೊರತೆ ಮಾತ್ರ ಎದ್ದು ಕಾಣುತ್ತಿದೆ.

ADVERTISEMENT

ಮುಖ್ಯವಾಗಿ ಪುರುಷ ಹಾಗೂ ಮಹಿಳಾ ಸಾರ್ವಜನಿಕ ಶೌಚಾಲಯ ಮಾತ್ರ ಹೇಳದಂತಾಗಿವೆ, ಮಹಿಳೆಯರು ಈ ಸಾರ್ವಜನಿಕ ಶೌಚಾಲಯದಲ್ಲಿ ಹೋಗುವ ಸ್ಥಿತಿಯಲ್ಲಿಲ್ಲ, ಹೋದರು ಸೋಂಕುಗಳು ತಗಲುವ ಪರಿಸ್ಥಿತಿ ಇದೆ, ಅಲ್ಲಿಯೇ ಕಸ ಕಡ್ಡಿಗಳು ಬಿದ್ದು ಕೊಳೆಯುತ್ತಿವೆ, ಇದರಿಂದ ಸಣ್ಣ ಸಣ್ಣ ಹುಳುಗಳಾಗಿದ್ದು ಒಳಗೆ ಕಾಲಿಟ್ಟರೆ ಸಾಕು ಗಬ್ಬೆದ್ದು ನಾರುತ್ತಿದೆ, ನಿರ್ಮಾಣವಾಗಿ ಹಲವು ವರ್ಷಗಳು ಕಳೆದರು ನೀರಿನ ಮುಖವನ್ನು ಈ ಶೌಚಾಲಯ ಕಂಡಿಲ್ಲ ಎಂಬಂತಿದೆ.

ಕೋರ್ಟ್ ಗೆ ಬಂದವರಿಗೆ ಕುಳಿತುಕೊಳ್ಳಲು ಎರಡು ತಗಡಿನ ಶೆಡ್ ನಿರ್ಮಾಣ ಮಾಡಿದ್ದಾರೆ ಅವುಗಳ ನಿರ್ವಹಣೆಯನ್ನು ಮಾಡದ ಕಾರಣ ಧೂಳಿನಿಂದ ತುಂಬಿ ತುಳುಕುತ್ತಿವೆ, ಸಾರ್ವಜನಿಕರಿಗೆ ಸರಿಯಾಗಿ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲವಾಗಿದೆ.

ವಕೀಲರ ಭವನದ ಮುಂದೆ ಸೇರಿದಂತೆ ಕೋರ್ಟ್ ಆವರಣದಲ್ಲಿ ಎಲೆ ಎಡಿಕೆ, ಗುಟಕಾ, ಮಾವಾ ತಿಂದು ಎಲ್ಲೆಂದರಲ್ಲಿ ವಕೀಲರು ಹಾಗೂ ಕಕ್ಷೀದಾರರು ಉಗುಳಿರುವದರಿಂದ ಕೋರ್ಟ್ ಸೌಂದರ್ಯ ಹಾಳಾಗುತ್ತಿದೆ, ಇಲ್ಲಿ ಉಗುಳಿದವರಿಗೆ ದಂಡ ವಿಧಿಸಲಾಗುವದು ಎಂದು ಕಾಗದದಲ್ಲಿ ಬೋರ್ಡ್ ಮಾತ್ರ ಹಚ್ಚಿದ್ದಾರೆ ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ, ಮಳೆಗಾಲ ಸಂದರ್ಭದಲ್ಲಿ ಕೋರ್ಟ್ ಮುಂಬಾಗದಲ್ಲಿ ನೀರು ನಿಂತುಕೊಂಡು ಸಂಚರಿಸಲು ತೊಂದರೆಯಾಗುತ್ತದೆ, ಕೋರ್ಟ್ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆ ಎದ್ದು ಕಾಣುತ್ತಿದ್ದು, ವಕೀಲರು ಹಾಗೂ ಕಕ್ಷೀದಾರರು ವಾಹನಗಳನ್ನು ಹಚ್ಚಲು ಸ್ಥಳದ ಕೊರತೆ ಎದ್ದು ಇದೆ.

ಗ್ರಾಮೀಣ ಭಾಗದಿಂದ ಹಲವಾರು ಮಹಿಳೆಯರು ಹಾಗೂ ವೃದ್ದರು ಬರುತ್ತಾರೆ,ಮೂತ್ರ ವಿಸರ್ಜನೆ ಮಾಡಲು ಸ್ವಚ್ಚತೆ ಇಲ್ಲ ಹಾಗೂ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ, ವಕೀಲರ ಸಂಘ ಹಾಗೂ ನ್ಯಾಯಾಧೀಶರು ಸೇರಿ ತಂಬಾಕು ಮುಕ್ತ ದಿನಾಚರಣೆ, ಮಹಿಳಾ ದಿನಾಚರಣೆ ಮಾಡುತ್ತಾರೆ ಆದರೆ ಅವರ ಆವರಣದಲ್ಲಿನ ಪರಿಸ್ಥಿತಿಯನ್ನು ಒಮ್ಮೆ ನೋಡಿಕೊಂಡು ಜನರಿಗೆ ಮಾದರಿಯಾಗಬೇಕು ಎಂದು ಆಲಬಾಳ ಗ್ರಾಮದ ಸಂಗಮೇಶ ತೇಲಿ ಆರೋಪಿಸಿದರು.

ವಕೀಲರು ಹಾಗೂ ಸಿಬ್ಬಂದಿಗಳು ತಮಗೆ ಮಾತ್ರ ಬಳಕೆ ಮಾಡಿಕೊಳ್ಳಲು ಶೌಚಾಲಯ ಇದೆ, ಹಾಗೂ ನ್ಯಾಯಾಧೀಶರು ಹಾಗೂ ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯಗಳು ಇವೆ, ಅವುಗಳನ್ನು ಮಾತ್ರ ಸ್ವಚ್ಚತೆ ಇಟ್ಟುಕೊಂಡಿದ್ದಾರೆ, ಆದರೆ ಸಾರ್ವಜನಿಕರು ಬಳಸುವ ಶೌಚಾಲಯ ಮಾತ್ರ ಗಬ್ಬೆದ್ದು ನಾರುತ್ತಿದೆ ಇದನ್ನು ವಕೀಲರ ಸಂಘ ಹಾಗೂ ಸಿಬ್ಬಂದಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯ ಮಾಡಿದ್ದಾರೆ.

ಹಳೆಯ ಕಾಲದ ಕಟ್ಟಡ ಇರುವದರಿಂದ ಕಟ್ಟಡ ಹಳೆಯದಾಗಿದೆ, ನಗರದ ಹೊರ ಭಾಗದಲ್ಲಿ ಕೋರ್ಟ್ ಸ್ಥಳಾಂತರ ಮಾಡಿ ಮುಂದಿನ 50 ವರ್ಷಗಳವರೆಗೆ ನಡೆಯಲು 10 ಎಕರೆ ಸ್ಥಳ ಅವಶ್ಯಕತೆ ಇದೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ, ಸಾರ್ವಜನಿಕ ಶೌಚಾಲಯ ಸೇರಿ ಸ್ವಚ್ಚತೆ ಮಾಡಿಸಲಾಗುವದು ಎಂದು ವಕೀಲರ ಸಂಘದ ಅಧ್ಯಕ್ಷ ಡಿ ಎಂ ಜತ್ತಿ ತಿಳಿಸಿದ್ದಾರೆ.

ಸ್ವಚ್ಛತೆಗೆ ಶೀಘ್ರ ಕ್ರಮ

ಹಳೆಯ ಕಾಲದ ಕಟ್ಟಡವಾಗಿದೆ. ನಗರದ ಹೊರ ಭಾಗದಲ್ಲಿ ನ್ಯಾಯಾಲಯಸ್ಥಳಾಂತರ ಮಾಡಿ ಮುಂದಿನ 50 ವರ್ಷಗಳವರೆಗೆ ನಡೆಯುವಂತೆ ಮಾಡಲು 10 ಎಕರೆ ಸ್ಥಳದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಸಾರ್ವಜನಿಕ ಶೌಚಾಲಯದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ಜತ್ತಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.