ADVERTISEMENT

ಜಮಖಂಡಿ: ಹದಗೆಟ್ಟ ರಸ್ತೆಗಳು; ಅನುದಾನಕ್ಕೆ ಪರದಾಟ

ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿ 403 ಕಿ.ಮೀ ರಸ್ತೆ ಹಾಳಾಗಿದೆ: ವಾಹನಗಳ ಸಂಚಾರಕ್ಕೆ ತೊಂದರೆ

ಆರ್.ಎಸ್.ಹೊನಗೌಡ
Published 6 ಅಕ್ಟೋಬರ್ 2025, 2:42 IST
Last Updated 6 ಅಕ್ಟೋಬರ್ 2025, 2:42 IST
ಜಮಖಂಡಿಯ ಛಟ್ಟುನಿಂಗ ದ್ಯಾನವನದಿಂದ ಅಂಬೇಡ್ಕರ್‌ ವೃತ್ತದ ವರೆಗೆ ಹದಗೆಟ್ಟ ರಸ್ತೆ
ಜಮಖಂಡಿಯ ಛಟ್ಟುನಿಂಗ ದ್ಯಾನವನದಿಂದ ಅಂಬೇಡ್ಕರ್‌ ವೃತ್ತದ ವರೆಗೆ ಹದಗೆಟ್ಟ ರಸ್ತೆ   

ಜಮಖಂಡಿ: ಸೂಕ್ತ ನಿರ್ವಹಣೆ ಕೊರತೆ, ಈಚೆಗೆ ಸುರಿದ ಭಾರಿ ಮಳೆಗೆ ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ.

ನಗರದ ದೇಸಾಯಿ ವೃತ್ತದಿಂದ ಅಂಬೇಡ್ಕರ್‌ ವೃತ್ತದ ವರೆಗೆ ಸಂಪೂರ್ಣವಾಗಿ ಕೆಟ್ಟಿದ್ದು, ಇಲ್ಲಿ ನಿತ್ಯ ಸಾವಿರಾರು ಬಸ್‌ಗಳು ಸಂಚರಿಸುತ್ತವೆ. ಜೊತೆಗೆ ನೂರಾರು ಆಟೊಗಳು, ಕಾರುಗಳು, ದ್ವಿಚಕ್ರ ವಾಹನಗಳು ಗುಂಡಿಬಿದ್ದ ರಸ್ತೆಗಳಲ್ಲಿಯೇ ಸಾಗುತ್ತವೆ. ರಸ್ತೆ ಹದಗೆಟ್ಟಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತವೆ. ಇದರಿಂದಾಗಿ ಒಂದರ ಹಿಂದೆ ಒಂದರಂತೆ ವಾಹನಗಳು ನಿಂತು ಕೆಲ ನಿಮಿಷಗಳವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ.

‘ತಾಲ್ಲೂಕಿನಲ್ಲಿರುವ ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿದಂತೆ ಹಲವಾರು ರಸ್ತೆಗಳು ಸಂಪೂರ್ಣವಾಗಿ ಕೆಟ್ಟಿವೆ, ಈ ಬಗ್ಗೆ ಜನಪ್ರತಿನಿಧಿಗಳು ಕೇಳಿದರೆ ಸರ್ಕಾರದಲ್ಲಿ ಅನುದಾನ ನೀಡುತ್ತಿಲ್ಲ ಎಂದು ಅಸಹಾಕತೆ ತೋರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಯನ್ನು ಎಲ್ಲಿ ಹೇಳಬೇಕು’ ಎಂದು ಶಿರಗುಪ್ಪಿ ಗ್ರಾಮದ ಕಲ್ಲಪ್ಪ ಬಿರಾದಾರ ಪ್ರಶ್ನಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 199 ಕಿ.ಮೀ ರಾಜ್ಯ ಹೆದ್ದಾರಿಯಲ್ಲಿ 141 ಕಿ.ಮೀ ರಸ್ತೆ ಹಾಳಾಗಿದ್ದು, ತಾಲ್ಲೂಕಿನಲ್ಲಿ 352 ಕಿ.ಮೀ ಜಿಲ್ಲಾ ಹೆದ್ದಾರಿ ಇದ್ದು ಅದರಲ್ಲಿ 262 ಕಿ.ಮೀ ರಸ್ತೆ ಹಾಳಾಗಿದೆ.

‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 329 ಕಿ.ಮೀ ಡಾಂಬರ್‌ ರಸ್ತೆಯಲ್ಲಿ 28 ಕಿ.ಮೀ ರಸ್ತೆ ಹಾಳಾಗಿದ್ದು, 156 ಕಿ.ಮೀ ಕಡಿಕರಣ ರಸ್ತೆಯಲ್ಲಿ 22 ಕಿ.ಮೀ ರಸ್ತೆ ಹಾಳಾಗಿದ್ದು, 624 ಮೊರಮ ಕಚ್ಚಾ ರಸ್ತೆಯಲ್ಲಿ 290 ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಒಟ್ಟು 1109 ಕಿ.ಮೀ ರಸ್ತೆಯಲ್ಲಿ 340 ಕಿ.ಮೀ ರಸ್ತೆ ಹಾಳಾಗಿದ್ದು, ಅಂದಾಜು ₹4 ಕೋಟಿ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆ ಪ್ರಸ್ತಾವ ಕಳಿಸಲಾಗಿದೆ. ಅನುದಾನ ಬಂದ ನಂತರ ರಸ್ತೆ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಟಿ.ಬಿ. ತಳವಾರ ಹೇಳಿದರು.

‘ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಸೇರಿ 403 ಕಿ.ಮೀ ರಸ್ತೆ ಹಾಳಾಗಿದ್ದು, ರಸ್ತೆ ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿದೆ. ಸರ್ಕಾರದಿಂದ ಅನುದಾನ ಬಂದಿದೆ, ಎರಡು ದಿನದಲ್ಲಿ ಗುತ್ತಿಗೆದಾರರನ್ನು ಪೈನಲ್ ಮಾಡಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಎಸ್.ಆರ್.ಬಂಡಿವಡ್ಡರ ಹೇಳಿದರು.

ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಿಂದ ಶಿರಗುಪ್ಪಿ ಮಡ್ಡಿವರೆಗೆ ಹದಗೆಟ್ಟ ರಸ್ತೆ
ತಾಲ್ಲೂಕಿನಲ್ಲಿ ರಸ್ತೆಗಳು ಹದಗೆಟ್ಟಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅಧಿಕಾರಿಗಳಿಗೆ ಹೇಳಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಈ ಬಗ್ಗೆ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿಲ್ಲ
ಜಗದೀಶ ಗುಡಗುಂಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.