ಜಮಖಂಡಿ: ದಿನದಿಂದ ದಿನಕ್ಕೆ ಕೃಷ್ಣಾ ನದಿ ನೀರು ಹೆಚ್ಚಾಗುತ್ತಿದ್ದು, ಕೃಷ್ಣಾ ನದಿ ತೀರದ ಹಲವು ಗ್ರಾಮಗಳಲ್ಲಿ ನೀರಿನಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ನದಿ ತೀರದ ಜನ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ತಾಲ್ಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆ ಸಂಪೂರ್ಣ ನಡುಗಡ್ಡೆಯಾಗಿದ್ದು ಆರು ಮನೆಗಳಿಗೆ ನೀರು ನುಗ್ಗಿತ್ತು, ಶುಕ್ರವಾರ ಆರು ಕುಟುಂಬಗಳು, ಜಾನುವಾರು, ಎಲ್ಲ ಸಾಮಗ್ರಿಗಳನ್ನು ಬೋಟ್ ಮೂಲಕ ಸ್ಥಳಾಂತರ ಮಾಡಲಾಗಿದೆ. ನೀರು ಇನ್ನೂ ಹೆಚ್ಚಾದರೆ ಇನ್ನೂ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ.
‘ನಾವು ಮನೆ ಬಿಟ್ಟು ಬಂದಿವಿ, ಮನುಷ್ಯರು ಎಲ್ಲರೆ ಅನ್ನ ತಿಂದು ಜೀವನ ಮಾಡ್ತಿವಿ. ನಮ್ಮ ಜಮೀನು ಎಲ್ಲ ಮುಳುಗ್ಯಾವ. ಜಾನುವಾರಿಗೆ ಏನು ಹಾಕುವುದು, ಅಧಿಕಾರಿಗಳು ಮೇವಿನ ವ್ಯವಸ್ಥೆ ಮಾಡುತ್ತಿಲ್ಲ. ಕೂಡಲೇ ಮೇವು ನೀಡಬೇಕು’ ಎಂದು ಸ್ಥಳಾಂತರವಾದ ಕುಟುಂಬದವರ ಒಕ್ಕೊರಲಿನಿಂದ ಅಳಲು ತೋಡಿಕೊಂಡರು.
‘ನಾವು ಎಲ್ಲ ಸಾಮಾನುಗಳನ್ನು ಗಂಟುಮೂಟೆ ಕಟ್ಟಿ ಇಟ್ಟೀವ್ರಿ, ಹೊಳಿ ಇನ್ನಷ್ಟು ಏರತಂದ್ರ ಸಾಮಾನುಗಳನ್ನು ಹೇರಿಕೊಂಡು ಹೋಗಬೇಕ್ರಿ, ನದಿ ನೀರು ಯಾವಾಗ ಇಳಿತೈತಿ ಅಂತ ಕಾಯಾಕತ್ತಿವ್ರಿ’ ಎನ್ನುತ್ತಾರೆ ರೈತ ಮುತ್ತಣ್ಣ ನಾಟಿಕಾರ.
ತಾಲ್ಲೂಕಿನ ಕೆ.ಡಿ. ಜಂಬಗಿ ಗ್ರಾಮಕ್ಕೆ ಹೋಗುವ ರಸ್ತೆಮೇಲೆ ನೀರು ಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ, ಗ್ರಾಮದ ಜನರು ನೀರಿನಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಇನ್ನೂ ಶೂರ್ಪಾಲಿ ಗ್ರಾಮಕ್ಕೆ ಹೋಗುವ ದೇವಗೌಡ ಬ್ಯಾರೇಜ್ ಮೇಲೆ ನೀರು ಬಂದು ಸಂಪರ್ಕ ಕಡಿತವಾಗಿದೆ.
ಆಲಗೂರ ಗ್ರಾಮದ ಶಿಂಧೆ ತೋಟದ ವಸ್ತಿಯಲ್ಲಿ ನೀರು ಬಂದಿದ್ದು ಸಂಚಾರದ ರಸ್ತೆಯ ಮೇಲೆ ನೀರು ಬಂದರೂ ರೈತರು ಅದೇ ಅಸ್ತೆಯ ಮೂಲಕ ಜಾನುವಾರಿಗೆ ಮೇವು ತರುವುದು ಸೇರಿದಂತೆ ನೀರಿನಲ್ಲಿಯೇ ಹಾಗೆ ಸಂಚರಿಸುವ ಅನಿವಾರ್ಯತೆ ಇದೆ.
ನೀರಿನ ಹರಿವು ಹೆಚ್ಚಳ: ಹಿಪ್ಪರಗಿ ಜಲಾಶಯದಲ್ಲಿ ಒಳ ಹರಿವು 2,26,700, ಹೊರಹರಿವು 2,25,950 ಇದೆ. ನೀರಿನ ಮಟ್ಟ 523.93 ಮೀಟರ್ ಹೊಂದಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ಹಿಪ್ಪರಗಿ ಜಲಾಶಯದ 22 ಗೇಟ್‌ಗಳನ್ನು ತೆಗೆದು ಬಂದಿರುವ ಎಲ್ಲ ನೀರನ್ನು ಹರಿಬೀಡಲಾಗುತ್ತಿದೆ.
ಮುತ್ತೂರ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ರೈತರೊಂದಿಗೆ ಚರ್ಚಿಸಿ ನಡುಗಡ್ಡೆಯಿಂದ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಮೇವಿನ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಜಾನುವಾರಿಗೆ ಮೇವು ನೀಡುವ ಕಾರ್ಯ ಮಾಡುತ್ತೇವೆ. ಜನರು ಸುರಕ್ಷಿತವಾಗಿ ಇರಲು ಸೂಚಿಸಲಾಗಿದೆ ಎಂದು ತಹಶೀಲ್ದಾರ ಅನೀಲ ಬಡಿಗೇರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.