
ಜಮಖಂಡಿ: ತಾಲ್ಲೂಕಿನ ಮರೆಗುದ್ದಿ ಗ್ರಾಮ ಪಂಚಾಯತಿಗೆ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಗ್ರಾಮ ಪಂಚಾಯತಿ ಸುಸಜ್ಜಿತ ನೂತನ ಕಟ್ಟಡ, ಕಚೇರಿ ಹಾಗೂ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಸಸಿ ಅಳವಡಿಕೆ ಸೇರಿದಂತೆ ಹಲವಾರು ಕೆಲಸಗಳನ್ನು ಗುರುತಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿತ್ತು, ಆ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿಂದ ಮಾಡಿರುವ ಕಾಮಗಾರಿಗಳ ಬಗ್ಗೆ ಅರ್ಜಿ ಹಾಕಿದ್ದು ಜಮಖಂಡಿ ತಾಲ್ಲೂಕಿನಲ್ಲಿ ಮರೆಗುದ್ದಿಗೆ ಮಾತ್ರ ಲಭಿಸಿದೆ.
ಗ್ರಾಮ ಪಂಚಾಯತಿಯಿಂದ ಕಸ ವಿಲೇವಾರಿ ಘಟಕ, ಸ್ಮಶಾನ ಅಭಿವೃದ್ಧಿ ಮತ್ತು ತಂತಿ ಬೇಲಿ ಅಳವಡಿಸುವದು, ಗ್ರಾಮದ ಶೇ.80 ರಷ್ಟು ಸಿಸಿ ರಸ್ತೆ ನಿರ್ಮಾಣ, ಮಚಗಾರ ಹಾಗೂ ಅಂಬೇಡ್ಕರ ಭವನ ನಿರ್ಮಾಣ, ಡಿಜಿಟಲ್ ಗ್ರಂಥಾಲಯ, 100 ಸೇವೆಗಳ ಬಾಪೂಜಿ ಸೇವಾ ಕೆಂದ್ರ, ಕೂಸಿನ ಮನೆ ನಿರ್ಮಾಣ, ಶಾಲೆಗೆ ವೈಫೈ ಸೇವೆ ಒದಗಿಸಿದ್ದು ಇದರಿಂದ ಶಾಲೆಗಳಲ್ಲಿ ಅಂತರ್ಜಾಲ ಬಳಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
’ಗ್ರಾಮೀಣ ಭಾಗದಲ್ಲಿ ಬಯಲು ಬಹಿರ್ದೆಸೆ ಪಿಡುಗನ್ನು ಹೋಗಲಾಡಿಸಲು ಗ್ರಾಮ ಪಂಚಾಯತಿಯಿಂದ 10 ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಲು ಶ್ರಮಿಸುತ್ತಿದ್ದೆವೆ, ಶಾಲೆಗಳಲ್ಲಿ 2 ಶೌಚಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಲಾಗಿದೆ ಹಾಗೂ ಗ್ರಾಮ ಮಂಚಾಯತಿಯಿಂದ ನಿರ್ವಹಣೆಯನ್ನು ಮಾಡಲಾಗುತ್ತಿದೆ’ ಎಂದು ಕಾರ್ಯದರ್ಶಿ ಮೀನಾಕ್ಷಿ ವ್ಯಾಪಾರಿ ತಿಳಿಸಿದರು.
’ಸಾಮಾನ್ಯ ಸಭೆಯಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಪ್ರತಿಯೊಬ್ಬ ಗ್ರಾಮಸ್ಥರಿಗೂ ತಿಳಿಯುವ ಉದ್ದೇಶದಿಂದ ಆನ್ ಲೈನ್ ಸಾಮಾನ್ಯ ಸಭೆ ನಡೆಸಲಾಗುತ್ತಿದೆ, ಕಳೆದ ಮೂರು ವರ್ಷದಿಂದ ಶೇ.100ರಷ್ಟು ಕರ ವಸೂಲಿ ಮಾಡಲಾಗುತ್ತಿದ್ದು, ಕರ ವಸೂಲಿಯನ್ನು ಡಿಜಿಟಲ್ ಮೂಲಕ ಮಾಡಲಾಗುತ್ತಿದೆ’ ಎಂದು ಬಿಲ್ ಕಲೆಕ್ಟರ್ ಸಂಜೀವ ತಿಳಿಸಿದರು.
’ಜಲಜೀವನ ಮಷಿನ್ (ಜೆಜೆಎಂ) ಕಾಮಗಾರಿ ಭಾಗಶಃ ಮುಗಿದಿದ್ದು ಪ್ರತಿ ಮನೆಗೆ ನಳ ಜೊಡನೆ ಮಾಡಿ ಅದರ ಮೂಲಕ ನೀರು ಬಿಡಲಾಗುತ್ತಿದೆ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ’ ಎನ್ನುತ್ತಾರೆ ಗ್ರಾ.ಪಂ ಅಧ್ಯಕ್ಷ ಹಣಮಂತ ಗುಡಿ.
ಮರೆಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಪಾರದರ್ಶಕ ಡಳಿತ ನೀಡಲಾಗುತ್ತಿದೆ ಇದನ್ನು ಗುರುತಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ 5 ಲಕ್ಷ ನಗದು ಬಹುಮಾನ ನೀಡಿದೆಅನೀಲ ಕಡಕೋಳ, ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.