
ಜಮಖಂಡಿ: ‘ತಂತ್ರಜ್ಞಾನದ ದುರ್ಬಳಕೆಯಿಂದ ಅಪರಾಧ ಕೃತ್ಯ ಹೆಚ್ಚುತ್ತಿವೆ. ಆದ್ದರಿಂದ ಯುವಜನತೆ ಮೊಬೈಲ್‌ನಿಂದ ದೂರವಿದ್ದು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಜ್ಯೋತಿ ಕಾಲೇಜು ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಗಿರೀಶ ಕಡ್ಡಿ ಮಾತನಾಡಿ, ‘ಹಿಂದೂ ಸನಾತನ ಧರ್ಮದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿ ಅದರ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ’ ಎಂದರು.
ವಕೀಲರಾದ ಲಕ್ಷ್ಮೀ ಸವದಿ ಮಾತನಾಡಿ, ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ದಲಿತರು, ಮಹಿಳೆಯರು, ಶೋಷಿತರು, ನೊಂದವರು, ಸಂತ್ರಸ್ತರು ಹಾಗೂ ಮಕ್ಕಳಿಗೆ ದೊರೆಯುವ ಉಚಿತ ಕಾನೂನು ಅರಿವು ಮತ್ತು ನೆರವು ಕುರಿತು ಮಾಹಿತಿ ನೀಡಿದರು.
ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೀನಾಕ್ಷಿ ನಡಕಟ್ಟಿ, ಗೀತಾ ಸಂತಿ ಇದ್ದರು. ಅಮೃತಾ ಬಳೋಲ ಪ್ರಾರ್ಥಿಸಿದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.