ರಾಂಪುರ: ಬಾಗಲಕೋಟೆ ತಾಲ್ಲೂಕಿನ ಭಗವತಿ, ಕಡ್ಲಿಮಟ್ಟಿ, ಬೆಣ್ಣೂರ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಗುರುವಾರ ಭೇಟಿ ನೀಡಿ, ಜಲಜೀವನ ಮಿಷನ್ ಯೋಜನೆಯಡಿಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಭಗವತಿ ಗ್ರಾಮದಲ್ಲಿ ಜೆಜೆಎಂ ನಲ್ಲಿಗಳಲ್ಲಿ ನೀರು ಸೋರುವುದನ್ನು ಗಮನಿಸಿದ ಸಿಇಒ, ನೀರು ಸೋರುವಿಕೆಯನ್ನು ತಡೆಗಟ್ಟಬೇಕು. ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚಿಸಿದರಲ್ಲದೇ, ಕಡ್ಲಿಮಟ್ಟಿ ಗ್ರಾಮದಲ್ಲಿನ ನೀರಿನ ಸಂಪರ್ಕಗಳನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು.
ನಂತರ ಬೆಣ್ಣೂರ ಪಂಚಾಯಿತಿ ವ್ಯಾಪ್ತಿಯ ಶಿರಗುಪ್ಪಿ, ತಳಗಿಹಾಳ ಹಾಗೂ ಇಲಾಳ ಗ್ರಾಮಗಳಿಗೆ ಭೇಟಿ ನೀಡಿದ ಶಶಿಧರ ಕುರೇರ, ಜೆಜೆಎಂ ಯೋಜನೆಯಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ನೀರು ಸರಬರಾಜು ವ್ಯವಸ್ಥೆಯಲ್ಲಿನ ಚಿಕ್ಕ ಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಂಡು ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮವಹಿಸುವಂತೆ ಪಿಡಿಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡಿರುವ ಗ್ರಾಮಗಳಲ್ಲಿ ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು ಎಂದು ಹೇಳಿದ ಅವರು, ಜಲಮೂಲಗಳು, ಜಲ ಸಂಗ್ರಹಾಗಾರಗಳನ್ನು ಸ್ವಚ್ಛವಾಗಿರಿಸುವಲ್ಲಿ ನಿಗಾವಹಿಸಬೇಕು. ಆಗಾಗ ಪೀಲ್ಡ್ ಟೆಸ್ಟ್ ಕಿಟ್ ಬಳಸಿ ಕುಡಿಯುವ ನೀರಿನ ಶುದ್ಧತೆಯನ್ನು ಪರೀಕ್ಷಿಸಬೇಕು. ಗ್ರಾಮ ನೀರು ನೈರ್ಮಲ್ಯ ಸಮಿತಿಗಳ ಸಭೆಗಳನ್ನು ನಡೆಸುವಂತೆ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಆಕಾಶ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.