ಬಾಗಲಕೋಟೆ: ದಕ್ಷಿಣ ಕರ್ನಾಟಕ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದಿದೆ. 2015ರೊಳಿಗೆ ಜಾರಿಯಾಗಬೇಕಿದ್ದ ನಂಜುಂಡಪ್ಪ ವರದಿ 2025 ಆದರೂ ಪೂರ್ಣಗೊಂಡಿಲ್ಲ. ಅಭಿವೃದ್ಧಿಯ ವೇಗ ಹೆಚ್ಚಾಗಲಿ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಡಿ.ಎಂ.ನಂಜುಂಡಪ್ಪ ವರದಿಯ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ಬಾಗಲಕೋಟೆ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನೀರಾವರಿಗೆ ಒತ್ತು ನೀಡಬೇಕು. ಉದ್ಯೋಗ ಮಾಡುವ ಮನೋಭಾವ ಬೆಳೆಸುವ ಕೆಲಸ ಆಗಬೇಕು. ಕೃಷಿ ವಿಜ್ಞಾನಿಗಳು ರೈತರ ಹೊಲಗಳಿಗೆ ಹೋಗುವಂತಾಗಬೇಕು. ಮುಖ್ಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ರಸ್ತೆಗಳ ಸುಧಾರಣೆ ಮೊದಲ ಹೆಜ್ಜೆಯಾಗಬೇಕು, ಇದರಿಂದ ಕೃಷಿ ಅವಲಂಬಿತ ಜನತೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಆ ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಬೇಕು ಎಂದು ಹೇಳಿದರು.
ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮಾತನಾಡಿ, ದಾಳಿಂಬೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳನ್ನು ಜನರು ಕಿತ್ತು ಹಾಕುತ್ತಿದ್ದಾರೆ. ನೀವು ತೋಟಗಾರಿಕೆ ಬೆಳವಣಿಗೆಯಾಗಿದೆ ಎನ್ನುತ್ತಿದ್ದೀರಿ. ಎಲ್ಲಿ ಹೆಚ್ಚಿದೆ. ರೈತರಿಗೆ ಬೆಳೆ ಸಂರಕ್ಷಣೆಗೆ ಶೀತಲಗೃಹದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿದರು.
ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲು ನೀಡಿದ ಮಾದರಿಯಂತೆ ಹಿಂದುಳಿದ ತಾಲ್ಲೂಕುಗಳಿಗೂ ಮೀಸಲು ವ್ಯವಸ್ಥೆ ತರಲು ಸರ್ಕಾರ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೇರಳ ಮಾದರಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಬೆಳೆಸಿದರೆ ಬಾದಾಮಿ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದ ಜನತೆಗೆ ಡಿಜಿಟಲ್ ಮಾರುಕಟ್ಟೆ ಬಗ್ಗೆ ತರಬೇತಿ ನೀಡಬೇಕು. ಚೆಕ್ ಡ್ಯಾಮ್‌ಗಳ ಮೂಲಕ ನೀರಾವರಿ ಜಾರಿಗೊಳಿಸಬೇಕು ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿ ಸದಸ್ಯ ಕಾರ್ಯದರ್ಶಿ ಎಂ. ವಿಶಾಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಅರಣ್ಯಾಧಿಕಾರಿ ರುಥ್ರೇನ್, ಸಮಿತಿಯ ಸದಸ್ಯರಾದ ಸಂಗೀತ ಕಟ್ಟಿಮನಿ, ಪ್ರೊ ಸಿದ್ದಪ್ಪ ಬಾಗಲಕೋಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.