ADVERTISEMENT

ಬಾಗಲಕೋಟೆ | ಬಿಜೆಪಿಯಿಂದ ಮಾತ್ರ ದಲಿತರಿಗೆ ನ್ಯಾಯ: ಛಲವಾದಿ ನಾರಾಯಣಸ್ವಾಮಿ

ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:50 IST
Last Updated 9 ಫೆಬ್ರುವರಿ 2024, 15:50 IST
ಬಾಗಲಕೋಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು
ಬಾಗಲಕೋಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು   

ಬಾಗಲಕೋಟೆ: ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗೆಳು ಹಾಗೂ ಬಿಜೆಪಿ ಚಿಂತನೆಗಳು ಹೊಂದಿಕೆಯಾಗುತ್ತವೆ. ನಾವು ಬಲಗೊಳ್ಳಬೇಕಾದರೆ ಬಿಜೆಪಿ ಬಲಗೊಳಿಸಬೇಕು. ಬಿಜೆಪಿಯಿಂದ ಮಾತ್ರ ದಲಿತರಿಗೆ ನ್ಯಾಯ ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನವನಗರದಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ಎಸ್‌ಸಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ಇಲ್ಲಿಯವರೆಗೆ ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಬರಿ ಮತಕ್ಕಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹೇಶ ಮಾತನಾಡಿ, ಕತ್ತೆ ನಿಂತರೂ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬುದು ಸುಳ್ಳಾಗಿದೆ. ದಲಿತರು ಕಾಂಗ್ರೆಸ್‌ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ. ಕಾಂಗ್ರೆಸ್ ಉರಿಯುವ ಮನೆ, ಅಲ್ಲಿ ಹೋದರೆ ಸುಟ್ಟು ಬೂದಿಯಾಗುತ್ತೀರಿ ಎಂದು ಎಚ್ಚರಿಸಿದರು.

ADVERTISEMENT

ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಅವರಿಗೆ ಅಧಿಕಾರ ಸಿಗದಂತೆ ಮಾಡಿದ ಸಿದ್ದರಾಮಯ್ಯ, ದಲಿತ ರಾಮಯ್ಯ ಆಗಿರುವುದು ವಿಪರ್ಯಾಸ. ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ಬಜೆಟ್‍ನಲ್ಲಿ ಆ ಹಣ ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.

ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಕಾಳೆ, ಬಸವರಾಜ ಯಂಕಂಚಿ, ಮಹೇಶ ಕೋತಿಮಾರ, ಗೀತಾ, ಡಾ. ಕ್ರಾಂತಿಕಿರಣ, ಸ್ಪಂದನಾ ವಿಜಯಪುರ, ಶಿವಾನಂದ ಟವಳಿ ಉಪಸ್ಥಿತರಿದ್ದರು.

ಹೊರಗೆ ಬಸಪ್ಪ ಒಳಗೆ ವಿಷಪ್ಪ: ನಾರಾಯಣಸ್ವಾಮಿ ವ್ಯಂಗ್ಯ

ಬಾಗಲಕೋಟೆ: ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗೆ ಬಸಪ್ಪ ಒಳಗೆ ವಿಷಪ್ಪ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಬರಬೇಕಿರುವುದು ಎಲ್ಲವೂ ಬಂದಿದೆ. ಬಂದಿಲ್ಲ ಎಂದರೆ ಕೇಂದ್ರಕ್ಕೆ ಮನವರಿಕೆ ಮಾಡುವುದು ಬಿಟ್ಟು ಕಾಂಗ್ರೆಸ್ ರಾಜಕೀಯಕ್ಕಾಗಿ ಟೀಕೆ ಮಾಡುತ್ತ ಕುಳಿತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಷ್ಟೇ ಆಡಳಿತದಲ್ಲಿದೆ. ದಕ್ಷಿಣ ಭಾರತವನ್ನು ಇಬ್ಭಾಗ ಮಾಡಿದರೆ ಇಲ್ಲಿಯಾದರೂ ಆಡಳಿತ ನಡೆಸಬಹುದು ಎಂಬ ಕೆಟ್ಟ ಆಲೋಚನೆಯಲ್ಲಿದ್ದಂತಿದೆ ಎಂದು ಟೀಕಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಶೇ40ರಷ್ಟು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೆಂಪಣ್ಣ ಹೇಳಿದ್ದು ಸತ್ಯ ಎಂದು ಆಗ ಹೇಳಿಕೊಂಡಿ ತಿರುಗಾಡಿದ್ರಿ. ಈಗ ಅವರ ಹೇಳಿಕೆ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.