ADVERTISEMENT

ಪರಮೇಶ್ವರ್, ಖರ್ಗೆಗೆ ಅನ್ಯಾಯ ಮಾಡಿದವರಿಂದ ನೀತಿ ಪಾಠ: ಕೆ.ಎಸ್.ಈಶ್ವರಪ್ಪ ಲೇವಡಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 9:41 IST
Last Updated 1 ಆಗಸ್ಟ್ 2021, 9:41 IST
ಶಾಸಕ ಕೆ.ಎಸ್.ಈಶ್ವರಪ್ಪ ಅವರ ಸಾಂದರ್ಭಿಕ ಚಿತ್ರ
ಶಾಸಕ ಕೆ.ಎಸ್.ಈಶ್ವರಪ್ಪ ಅವರ ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ’ಮುಖ್ಯಮಂತ್ರಿ ಆಭ್ಯರ್ಥಿಯಾಗಿದ್ದ ಡಾ.ಜಿ.ಪರಮೇಶ್ವರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿ ತುಳಿದವರು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅನ್ಯಾಯ ಮಾಡಿದವರು ಈಗ ಬಿಜೆಪಿಗೆ ಬುದ್ಧಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಬಿಜೆಪಿಗೆ ಬುದ್ಧಿ ಹೇಳುವ ನೈತಿಕತೆಕಾಂಗ್ರೆಸ್‌ ಮುಖಂಡರಿಗೆ ಇಲ್ಲ‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೂ ನಮಗೆ (ಬಿಜೆಪಿ) ಪೂರ್ಣ ಬಹುಮತ ಬಂದಿರಲಿಲ್ಲ. ಗೊಂದಲದಲ್ಲಿ ಯಾರನ್ನೋ ಕರೆದುಕೊಂಡು ಸರ್ಕಾರ ಮಾಡಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ ಮೊದಲುಗೊಂಡು ಮೊನ್ನೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟು ಬಾರಿ ಪೂರ್ಣ ಬಹುಮತ ದೊರೆತಿದೆ. ಹಾಗಿದ್ದರೂ ದಲಿತರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ‘ ಎಂದು ಪ್ರಶ್ನಿಸಿದರು.

’ರಾಷ್ಟ್ರಪತಿ ರಾಮನಾಥ ಕೋವಿಂದ್, ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕೂಡ ಪರಿಶಿಷ್ಟ ಸಮುದಾಯದವರು. ಅವರನ್ನು ನೇಮಕ ಮಾಡುವಂತೆ ಎಐಸಿಸಿ ನಾಯಕಿ ಸೋನಿಯಾಗಾಂಧಿ ಬಿಜೆಪಿಗೆ ಪತ್ರ ಬರೆದಿದ್ದರೇ‘ ಎಂದು ವ್ಯಂಗ್ಯವಾಡಿದರು.

ADVERTISEMENT

ಹಿಂದುಳಿದ ವರ್ಗ, ಮೀಸಲಾತಿ, ಅಲ್ಪಸಂಖ್ಯಾತರ ಉದ್ಧಾರ ಇವೆಲ್ಲವೂ ಬರೀ ಕಾಂಗ್ರೆಸ್‌ನವರ ಭಾಷಣದಲ್ಲಿ ಉಳಿದಿದೆ. ಆದರೆ ಬಿಜೆಪಿಗೆ ಭಾಷಣದಲ್ಲಿ ನಂಬಿಕೆ ಇಲ್ಲ. ಹಿಂದುಳಿದವರಿಗೆ ಆದ್ಯತೆ ನೀಡುವುದನ್ನು ನೇರವಾಗಿ, ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದೇವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸಂಪುಟದ 81 ಸಚಿವರಲ್ಲಿ 45 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ.ದೇಶದ ಇತಿಹಾಸದಲ್ಲಿಯೇ ಇದೇ ಮೊದಲು ಬಾರಿಗೆ ಹಿಂದುಳಿದ ಸಮಾಜದವರಿಗೆ ಇಷ್ಟೊಂದು ಪ್ರಾತಿನಿಧ್ಯ ದೊರೆತಿದೆ. ಇದನ್ನು ಸಿದ್ದರಾಮಯ್ಯ ಸ್ವಾಗತಿಸಬೇಕಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.