ADVERTISEMENT

ರಬಕವಿ ಬನಹಟ್ಟಿ: ಕಾಡಸಿದ್ಧೇಶ್ವರರ ಮದ್ದಿನ ಜಾತ್ರೆ ಈಗ ರೊಟ್ಟಿ ಜಾತ್ರೆ

ಮದ್ದು ಸುಡುವ ಬದಲು ಜಾತ್ರೆಗೆ ಬರುವ ಭಕ್ತರಿಗೆ ರೊಟ್ಟಿ ಪ್ರಸಾದ ನೀಡಲು ಸಮಿತಿ ನಿರ್ಧಾರ

ವಿಶ್ವಜ ಕಾಡದೇವರ
Published 14 ಸೆಪ್ಟೆಂಬರ್ 2025, 4:21 IST
Last Updated 14 ಸೆಪ್ಟೆಂಬರ್ 2025, 4:21 IST
ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ ಪ್ರಸಾದ ಸೇವೆಗೆ ವಿಶ್ವಕರ್ಮ ಸಮಾಜದ ಮಹಿಳೆಯರು ರೊಟ್ಟಿಯ ಬುಟ್ಟಿಗಳನ್ನು ಹೊತ್ತುಕೊಂಡು ಬಂದರು 
ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ ಪ್ರಸಾದ ಸೇವೆಗೆ ವಿಶ್ವಕರ್ಮ ಸಮಾಜದ ಮಹಿಳೆಯರು ರೊಟ್ಟಿಯ ಬುಟ್ಟಿಗಳನ್ನು ಹೊತ್ತುಕೊಂಡು ಬಂದರು    

ರಬಕವಿ ಬನಹಟ್ಟಿ: ಉತ್ತರ ಕರ್ನಾಟಕದ ಪಟಾಕಿ ಜಾತ್ರೆ ಎಂದೇ ಪ್ರಸಿದ್ಧವಾಗಿದ್ದ ಸ್ಥಳೀಯ ಕಾಡಸಿದ್ಧೇಶ್ವರರ ಜಾತ್ರೆ ಈಗ ರೊಟ್ಟಿ ಜಾತ್ರೆಯಾಗಿ ಪರಿಣಮಿಸುತ್ತಿದೆ.

ಜಾತ್ರೆ ದಿನದಿಂದು ರಾತ್ರಿ ಎಂಟುವರೆಗೆ ಕಾಡಸಿದ್ಧೇಶ್ವರರ ರಥೋತ್ಸವ ನಡೆಯುತ್ತದೆ. ರಥದ ಮುಂಭಾಗದಲ್ಲಿ ಭಕ್ತರು ಲಕ್ಷಾಂತರ ಮೌಲ್ಯದ ಮದ್ದನ್ನು ಹರಕೆ ರೂಪದಲ್ಲಿ ಸುಡುತ್ತಿದ್ದರು.

ಹದಿನೈದು ವರ್ಷಗಳಿಂದ ಜಾತ್ರೆಯ ಮೂರು ದಿನ ಪ್ರಸಾದ ಸೇವೆ ನಡೆಯುತ್ತದೆ. ಹಲವಾರು ವರ್ಷಗಳಿಂದ ಭಕ್ತರು ಮದ್ದು ಸುಡುವ ಬದಲಾಗಿ ಪ್ರಸಾದ ಸೇವೆಗೆ ದವಸ– ಧಾನ್ಯ ನೀಡಲು ಆರಂಭಿಸಿದರು.

ಈ ಬಾರಿ ಸ್ಥಳೀಯ ಕಾಡಸಿದ್ಧೇಶ್ವರ ಜಾತ್ರೆಯ ಪ್ರಸಾದ ಸೇವಾ ಸಮಿತಿಯವರು ಜಾತ್ರೆಗೆ ಬರುವ ಭಕ್ತರಿಗೆ ರೊಟ್ಟಿ ಪ್ರಸಾದ ಸೇವೆ ಮಾಡಲು ತೀರ್ಮಾನಿಸಿದ್ದು, ರಬಕವಿ ಬನಹಟ್ಟಿ, ರಾಂಪುರ, ಹೊಸೂರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಜನರು ದೇವಸ್ಥಾನಕ್ಕೆ ರೊಟ್ಟಿಗಳನ್ನು ನೀಡುತ್ತಿದ್ದಾರೆ.

ಇದರಿಂದಾಗಿ ನಗರದ ಪ್ರತಿಯೊಂದು ಮನೆಯಲ್ಲಿ ರೊಟ್ಟಿ ಮಾಡುವ ಶಬ್ದ ಸಾಮಾನ್ಯವಾಗಿದೆ. ಜೊತೆಗೆ ಇದರಿಂದ ರೊಟ್ಟಿಗಳನ್ನು ಮಾಡಿ ಮಾರಾಟ ಮಾಡುವವರಿಗೆ ಅನುಕೂಲವಾಗಿದೆ. ನಗರದ ವಿವಿಧೆಡೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ರೊಟ್ಟಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಒಂದೊಂದು ಬಡಾವಣೆಯ, ಸಮುದಾಯದ, ಓಣಿಯ ಹೆಣ್ಣು ಮಕ್ಕಳು ರೊಟ್ಟಿ ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬಂದು ರೊಟ್ಟಿಗಳನ್ನು ಸಲ್ಲಿಸುತ್ತಿದ್ಧಾರೆ.

ಜಾತ್ರೆಯ ಮೂರು ದಿನ ಮಧ್ಯಾಹ್ನ ಭಕ್ತರಿಗೆ ರೊಟ್ಟಿ, ಸಾರು, ಕಿಚಡಿ ಇಲ್ಲವೆ ಅನ್ನ ಪ್ರಸಾದ ನೀಡಲು ಸೇವಾ ಸಮಿತಿಯ ಸದಸ್ಯರು ಸಜ್ಜಾಗಿದ್ದಾರೆ. ಮೂರು ದಿನ ಅಂದಾಜು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನರಿಗೆ ಪ್ರಸಾದ ಸೇವೆಯ ವ್ಯವಸ್ಥೆ  ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಪ್ರಸಾದ ಸೇವಾ ಸಮಿತಿಯ ಬ್ರಿಜ್ಮೋಹನ ಚಿಂಡಕ, ಗಿರೀಶ ಕಾಡದೇವರ, ಶ್ರೀಶೈಲ ಅಥಣಿ.

‘ಭಕ್ತರು ರೊಟ್ಟಿಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದು, ಇದರಿಂದಾಗಿ ಐದಾರು ದಿನಗಳಲ್ಲಿ ಸಾವಿರಾರು ರೊಟ್ಟಿಗಳನ್ನು ಮಾರಾಟ ಮಾಡಿದ್ದೇವೆ. ಇದರಿಂದ ನಮಗೆ ಅನುಕೂಲವಾಗಿದೆ’ ಎನ್ನುತ್ತಾರೆ ಲಕ್ಷ್ಮಿ ನಗರದ ನಿವಾಸಿಗಳಾದ ಬಸವ್ವ ಸಿಂದೆ, ಲಕ್ಷ್ಮಿ ಸಿಂದೆ ಸುನೀತಾ ಸಿಂದೆ.

ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ ಪ್ರಸಾದ ಸೇವೆಗೆ ಮಹಿಳೆಯರು ಮನೆಯ ಆವರಣದಲ್ಲಿ ರೊಟ್ಟಿ ಮಾಡಿದರು
ಮದ್ದು ಸುಡುವುದರ ಮೂಲಕ ಪ್ರಸಿದ್ಧವಾಗಿದ್ದ ಕಾಡಸಿದ್ಧೇಶ್ವರರ ಜಾತ್ರೆ ಈಗ ಉತ್ತರ ಕರ್ನಾಟಕದ ರೊಟ್ಟಿ ಜಾತ್ರೆಯಾಗಿರುವುದು ಒಳ್ಳೆಯ ಬೆಳವಣಿಗೆ
ಮಲ್ಲಿಕಾರ್ಜುನ ತುಂಗಳ ಅಧ್ಯಕ್ಷ ಸೋಮವಾರ ಪೇಟೆಯ ದೈವ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.