ಜಮಖಂಡಿ: ಶರಣ ಸಾಹಿತಿ ಎಂ.ಎಸ್. ಸಿಂಧೂರ ಮಹಾರಾಷ್ಟ್ರದ ಜತ್ತ ಭಾಗದ ಗಡಿನಾಡಿನಲ್ಲಿ ಕನ್ನಡ ಧ್ವಜ ಹಾರಿಸಿದ್ದರು ಎಂದು ವಿಜಯಪುರ ಜಿಲ್ಲೆಯ ಮುಳವಾಡದ ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.
ತಾಲ್ಲೂಕಿನ ತುಂಗಳ ಗ್ರಾಮದ ಸಿಂಧೂರ ತೋಟದಲ್ಲಿ ಮಂಗಳವಾರ ಆಯೋಜಿಸಿದ್ದ ಶರಣ ಮಲ್ಲಪ್ಪ ಸಿಂಧೂರ, ಶರಣೆ ಶಾಂತಲಾ ಸಿಂಧೂರ ಸ್ಮರಣಾರ್ಥ ಸಿಂಧೂರ ಪ್ರತಿಷ್ಠಾನ ಆಶ್ರಯದಲ್ಲಿ ‘ಪ್ರತಿಭಾ ಪುರಸ್ಕಾರ’ ಹಾಗೂ ‘ಸಿಂಧೂರ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂಧೂರ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮರೇಗುದ್ದಿ ಅಡವಿ ಸಿದ್ಧೇಶ್ವರ ಮಠದ ಡಾ.ನಿರುಪಾದೀಶ ಸ್ವಾಮೀಜಿ ‘ಸಿಂಧೂರ ಸಿರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಎಂ.ಎಸ್. ಸಿಂಧೂರ ಅವರಲ್ಲಿ ವಾಕ್‌ಚಾತುರ್ಯ ಕೌಶಲವಿತ್ತು ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ಸಿಂಧೂರ ಅವರು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದವರು. ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತಿ ಮಲ್ಲಿಕಾರ್ಜುನ ಯಾಳವಾರ, ಮಹಾರಾಷ್ಟ್ರ ಸಂಖ ಗ್ರಾಮದ ಕನ್ನಡ ಹೋರಾಟಗಾರ ಡಾ.ಆರ್.ಕೆ. ಪಾಟೀಲ, ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ, ಬೀದರ-ಕಲಬುರ್ಗಿಯ ಕೆಎಂಎಫ್ ಅಧ್ಯಕ್ಷ ರಾಮಚಂದ್ರ ಕೆ. ಪಾಟೀಲ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಶ್ರೀಧರ ಇಟ್ನಾಳ, ಸವಿತಾ ತೇಲಿ, ರೇಣುಶ್ರೀ ಐಗಳಿ, ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳಾದ ಭಾಗ್ಯಾ ಹೂಗಾರ, ಮೌನೇಶ ಕಂಬಾರ, ಭಾವನಾ ನೇಮಗೌಡ, ರೇಣುಕಾ ಸಾವಳಗಿ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಪಶುವೈದ್ಯ ಡಾ.ಭೀಮು ಖಾನಾಪುರ, ಎಂ.ಡಿ ಪದವಿ ಪಡೆದ ಡಾ.ಐಶ್ವರ್ಯ ಸಿಂಧೂರ, ಅಮೆರಿಕದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಗಂಗಾ ಸಿಂಧೂರ ಅವರನ್ನು ಸನ್ಮಾನಿಸಲಾಯಿತು.
ಜಿ.ಎಂ.ಸಿಂಧೂರ ಸ್ವಾಗತಿಸಿದರು. ನಿವೃತ್ತ ಜಂಟಿ ನಿರ್ದೇಶಕ ಎಂ.ಎಂ. ಸಿಂಧೂರ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಸಿಂಧೂರ ಬಿನ್ನವತ್ತಳೆ ಓದಿದರು. ಸಾಹಿತಿ ಎಂ.ಬಿ. ಇಂಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.