ADVERTISEMENT

ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ: ಎಸ್.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 8:43 IST
Last Updated 30 ಸೆಪ್ಟೆಂಬರ್ 2021, 8:43 IST
ಎಸ್.ಆರ್.ಪಾಟೀಲ
ಎಸ್.ಆರ್.ಪಾಟೀಲ   

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಶ್ರಯದಲ್ಲಿ ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಹೆಸರಿನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ ತಾಲ್ಲೂಕು ಅನಗವಾಡಿಯ ಘಟಪ್ರಭಾ ನದಿ ಸೇತುವೆಯಿಂದ ವಿಜಯಪುರ ಜಿಲ್ಲೆ ಕೊರ್ತಿ ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆವರೆಗೆ 24 ಕಿ.ಮೀ ದೂರದ ಈ ನಡಿಗೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರು, ರೈತ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ. ಇದೊಂದು ಪಕ್ಷಾತೀತ ಹಾಗೂ ನಿರ್ಣಾಯಕ ಹೋರಾಟ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಬಾಗಲಕೋಟೆ ಚರಂತಿಮಠದ ಪ್ರಭುಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ನಡಿಗೆ ಆರಂಭವಾಗಲಿದೆ ಎಂದರು.

ADVERTISEMENT

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಅನುಷ್ಠಾನಕ್ಕೆ ₹51 ಸಾವಿರ ಕೋಟಿ ಅಗತ್ಯವಿದೆ. ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಇದೇ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿದೆ. ನೆರೆಯ ತೆಲಂಗಾಣದಲ್ಲಿ ಕೇವಲ ಮೂರು ವರ್ಷದಲ್ಲಿ ₹1.2 ಲಕ್ಷ ಕೋಟಿ ವೆಚ್ಚದ ಕಾಲೇಶ್ವರ ನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದೆ. ಇಂತಹ ನಿದರ್ಶನ ಕಣ್ಣ ಮುಂದೆಯೇ ಇರುವುದನ್ನು ಸರ್ಕಾರದ ಗಮನಕ್ಕೆ ತರಲು ಹಾಗೂ ಕುಂಭಕರ್ಣ ನಿದ್ರೆಯಲ್ಲಿರುವ ಬಿಜೆ‍ಪಿ ಸರ್ಕಾರವನ್ನು ಎಚ್ಚರಿಸಲು ಈ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಅನುಷ್ಠಾನಗೊಂಡಲ್ಲಿ ರಾಜ್ಯದ ಪಾಲಿನ 130 ಟಿಎಂಸಿ ಅಡಿ ಸದ್ಬಳಕೆಯಾಗಲಿದೆ. 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಭೂಮಿ, ಮನೆ, ಮಠ ಆಸ್ತಿ–ಪಾಸ್ತಿ ಕಳೆದುಕೊಳ್ಳುವವರಿಗೆ ರಾಷ್ಟ್ರೀಯ ಪುನರ್‌ವಸತಿ ನೀತಿಯನ್ವಯ ನ್ಯಾಯಯುತ ಪರಿಹಾರ ನೀಡಬೇಕು. ಭೂಮಿಗೆ ಹಾಗೂ ಕಟ್ಟಡಗಳಿಗೆ ಪರಿಹಾರವನ್ನು ಸಬ್‌ರಿಜಿಸ್ಟ್ರಾರ್ ಕಚೇರಿಯ ಮಾರ್ಗಸೂಚಿ ಬೆಲೆಗಳನ್ನು ಪರಿಷ್ಕರಿಸಿ ನಿಗದಿ ಮಾಡಬೇಕು. ಸರ್ಕಾರಿ ಹುದ್ದೆಗಳಿಗೆ ಮಾತ್ರವಲ್ಲ ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಶಿಕ್ಷಣದಲ್ಲಿ ಸಂತ್ರಸ್ತರ ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದು ಸೇರಿದಂತೆ 33 ಬೇಡಿಕೆಗಳನ್ನು ಈಡೇರಿಸಲು ಈ ವೇಳೆ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಮುಖಂಡ ಸತೀಶ ಬಂಡಿವಡ್ಡರ, ರೈತ ಸಂಘದ ಮುಖಂಡ ಮುತ್ತಪ್ಪ ಕೋಮಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.