
ಕೆರೂರ: ‘ಕೆರೂರ ಪಟ್ಟಣವು ಅತಿ ಹೆಚ್ಚು ಕಲಾವಿದರನ್ನು ಹೊಂದಿದ ಜಾನಪದ ಕಲೆಗಳ ತವರೂರಾಗಿದೆ. ಅದಕ್ಕೆ ಕೆರೂರ ಉತ್ಸವದಂತಹ ವೇದಿಕೆ ಸಾಕ್ಷಿಯಾಗಿದೆ’ ಎಂದು ಜಾನಪದ ಕಲಾವಿದ ಶಬ್ಬೀರ ಢಾಂಗೆ ಹೇಳಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಶಿರೂರ ಪ್ರತಿಷ್ಠಾನ ಹಾಗೂ ಗಳೆಯರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕೆರೂರ ಉತ್ಸವ - ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ, ಬೆಳೆಸುವುದು ಇಂದಿನ ಪೀಳಿಗೆಗೆ ಬಹುದೊಡ್ಡ ಜವಾಬ್ದಾರಿಯಾಗಿದೆ. ವೆಂಕಟೇಶ ಮೂರ್ತಿ ಶಿರೂರ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹುಟ್ಟುರಿನ ಕಲಾವಿದರನ್ನು ಗುರುತಿಸುವಂತಹ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
‘ದಶಕದ ಹೊಸ್ತಿಲಲ್ಲಿರುವ ಶಿರೂರ ಪ್ರತಿಷ್ಠಾನವು ಪ್ರತಿವರ್ಷ ಕಲಾವಿದರ ಪರಿವಾರವನ್ನು ಹಾಗೂ ಗೆಳೆಯರ ಬಳಗವನ್ನು ಒಂದೇ ವೇದಿಕೆಯಲ್ಲಿ ಬೆರೆಯುವಂತೆ ಮಾಡಿರುವುದು ಸಂತೋಷಕರ ಸಂಗತಿ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದರ ಸಂಗೀತ ಮತ್ತು ಜ್ಯೂನಿಯರ್ ವಿಷ್ಣುವರ್ಧನ ಅವರ ನಟನೆ ಪ್ರೇಕ್ಷಕರನ್ನು ರಂಜಿಸಿತು.
ಪ್ರಾಣೇಶಾಚಾರ್ಯ ಕೆರೂರ, ಶಿರೂರ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮೂರ್ತಿ ಶಿರೂರ, ನಿವೃತ್ತ ಶಿಕ್ಷಕರಾದ ಡಿ.ಪಿ.ಅಮಲಝರಿ, ಆರ್.ಆರ್.ಶೆಟ್ಟರ, ಎಂ.ಜಿ.ಕಿತ್ತಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಮಾಂತೇಶ ಮೇಣಸಗಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.