ADVERTISEMENT

ಮೂಲ ಸೌಕರ್ಯಕ್ಕೆ ಕಾದಿರುವ ಕೊಟ್ನಳ್ಳಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 8:00 IST
Last Updated 27 ಸೆಪ್ಟೆಂಬರ್ 2023, 8:00 IST
ರಸ್ತೆ ಪಕ್ಕ ಚರಂಡಿ ಇಲ್ಲದೆ ರಸ್ತೆ ನಿರ್ಮಾಣ 
ರಸ್ತೆ ಪಕ್ಕ ಚರಂಡಿ ಇಲ್ಲದೆ ರಸ್ತೆ ನಿರ್ಮಾಣ    

ವರದಿ: ಎಚ್.ಎಸ್. ಘಂಟಿ

ಗುಳೇದಗುಡ್ಡ: ತಾಲ್ಲೂಕಿನ ಕೊಟ್ನಳ್ಳಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 7 ಕಿ.ಮೀ ಅಂತರದಲ್ಲಿದ್ದು, ಮೂಲಸೌಕರ್ಯಕ್ಕಾಗಿ ಕಾಯುತ್ತಿದೆ.

ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಈ ಗ್ರಾಮ ಅತಿವೃಷ್ಟಿಯಿಂದ ತತ್ತರಿಸಿದ್ದು, ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿ 5 ವರ್ಷಗಳ ಹಿಂದೆಯೇ ಅರ್ಧ ಕಿ.ಮೀ ಅಂತರದಲ್ಲಿ ಜಾಗ ಗುರುತಿಸಿ 250 ಮನೆಗಳಿದ್ದ ಗ್ರಾಮದಲ್ಲಿ 75 ಮನೆಗಳನ್ನು ಮಾತ್ರ ಸ್ಥಳಾಂತರಿಸಿದೆ. ಇನ್ನುಳಿದ ಮನೆಗಳನ್ನು ಇದುವರೆಗೂ ಸ್ಥಳಾಂತರಿಸಿಲ್ಲ. ಆ ಎಲ್ಲ ಮನೆಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಅಲ್ಲಿಯ ಜನ ಆಗ್ರಹಿಸುತ್ತಿದ್ದಾರೆ.

ADVERTISEMENT

ಸ್ಥಳಾಂತರವಾದ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮನೆಗಳಿದ್ದು 1600 ಜನಸಂಖ್ಯೆಇದೆ. ಸಮೀಪದ ಲಾಯದಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಬರುತ್ತಿದ್ದು, ಒಟ್ಟು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಕೆಲಸಗಳಾಗಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಗ್ರಾಮದಲ್ಲಿವೆ.

ಗ್ರಾಮದಲ್ಲಿ ಸಮಸ್ಯೆಗಳು ಇವೆ. ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಚರಂಡಿ ನಿರ್ಮಾಣ ರಸ್ತೆ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಪದ್ಮಾವತಿ, ಪಿಡಿಒ, ಗ್ರಾಮ ಪಂಚಾಯಿತಿ ಲಾಯದಗುಂದಿ

ಪುನರ್ವಸತಿ ಗ್ರಾಮದಲ್ಲಿ ಸೈಟುಗಳ ಅತಿಕ್ರಮಣ: ಪುನರ್ವಸತಿ ಗ್ರಾಮದಲ್ಲಿ 75 ಮನೆಗಳು ನಿರ್ಮಾಣವಾಗಿದ್ದು ಇನ್ನೂ ಸರ್ಕಾರಿ ಸೈಟುಗಳ ಖಾಲಿ ಇರುವುದರಿಂದ ಕೆಲವರು ತಗಡಿನ ಶೆಡ್ಡುಗಳನ್ನು ಹಾಕುವ ಮೂಲಕ ಸೈಟುಗಳನ್ನು ಅತಿಕ್ರಮಣ ಮಾಡುತ್ತಿದ್ದಾರೆ. ಪಂಚಾಯತಿ, ತಾಲ್ಲೂಕು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಶೌಚಾಲಯದ ವ್ಯವಸ್ಥೆಗಾಗಿ ಗ್ರಾಮ ಪಂಚಾಯತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. ಬಯಲು ಬಹಿರ್ದೆಸೆ ಇಂದಿಗೂ ಇದೆ.

ಗ್ರಾಮದ ಸಂಪೂರ್ಣ ಸ್ಥಳಾಂತರವಾಗಬೇಕು. ಸಾರ್ವಜನಿಕ ಶೌಚಾಲಯ ಉತ್ತಮ ಸಿಸಿ ರಸ್ತೆ ಪರಿಸರ ಅಭಿವೃದ್ಧಿ ಶಾಲೆಗೆ ಸೌಲಭ್ಯಗಳನ್ನು ಒದಗಿಸಬೇಕಿದೆ.
ಆಸಂಗೆಪ್ಪ ಚಲವಾದಿ, ಗ್ರಾಮ ಪಂಚಾಯತಿ ಸದಸ್ಯರು, ಕೊಟ್ನಳ್ಳಿ

ಸ್ಮಶಾನ ಇಲ್ಲದೇ ಇರುವುದರಿಂದ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಾರೆ. ಗ್ರಾಮದಲ್ಲಿ ಮಾರುತೇಶ್ವರ, ದ್ಯಾಮವ್ವ, ಗುಡಿಗಳಿವೆ. 3 ವರ್ಷಕ್ಕೊಮ್ಮೆ 5 ಕೀ.ಮೀ. ಅಂತರದಲ್ಲಿರುವ ಗ್ರಾಮದೇವತೆ ದ್ಯಾಮವ್ವನ ಜಾತ್ರೆ ಮಾಡುತ್ತಾರೆ. ಆದರೆ ಅಲ್ಲಿಗೆ ಹೋಗಲು ಉತ್ತಮ ರಸ್ತೆ ಇಲ್ಲ.

ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆ

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಲ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಇಲ್ಲಿಯ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ಶಾಲೆ ಇದ್ದು. ನಿಯಮಾನುಸಾರ ಕಟ್ಟಡಗಳಿಲ್ಲ ಗುಡ್ಡದ ಹತ್ತಿರ 2 ಕೊಠಡಿ ಕಟ್ಟಿದ್ದಾರೆ ಅಲ್ಲಿ ತರಗತಿಗಳು ನಡೆಯುತ್ತಿಲ್ಲ. ಆಟದ ಮೈದಾನವಿಲ್ಲ. ವಿದ್ಯಾರ್ಥಿಗಳಿಗೆ ಶೌಚಾಲಯಗಳಿಲ್ಲ.

ವೈದ್ಯರ ಕೊರತೆ

ಲಾಯದಗುಂದಿ ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಇದ್ದು ಅಲ್ಲಿ ವೈದ್ಯರ ಕೊರತೆಯಿದ್ದುದರಿಂದ ಕೋಟ್ನಳ್ಳಿ ಗ್ರಾಮಕ್ಕೆ ಬರುವುದು ದುಸ್ತರವಾಗಿದೆ. ಉಪ ಆರೋಗ್ಯ ಕೇಂದ್ರ ಸ್ಥಾಪನೆ ಆಗದಿರುವ ಕಾರಣಕ್ಕೆ ಜನರಿಗೆ ಅನಾರೋಗ್ಯವಾದರೆ ಗುಳೇದಗುಡ್ಡ ಪಟ್ಟಣವನ್ನೇ ಅವಲಂಬಿಸಿದ್ದಾರೆ.

ಕಳಪೆ ರಸ್ತೆ ನಿರ್ಮಾಣ ಮಾಡಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.