ADVERTISEMENT

ಮುತ್ತೂರು: ಮನೆಗಳಿಗೆ ನುಗ್ಗಿದ ನೀರು, ಆರಂಭವಾಗದ ಕಾಳಜಿ ಕೇಂದ್ರ

ಆರ್.ಎಸ್.ಹೊನಗೌಡ
Published 22 ಆಗಸ್ಟ್ 2025, 2:45 IST
Last Updated 22 ಆಗಸ್ಟ್ 2025, 2:45 IST
ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮವು ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಂತಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ
ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮವು ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಂತಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ   

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ತಾಲ್ಲೂಕಿನ ಮುತ್ತೂರು ನಡುಗಡ್ಡೆಯಾಗಿದೆ. ಹಲವು ರಸ್ತೆಗಳ ಮೇಲೆ ನೀರು ಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ಮುತ್ತೂರ ಗ್ರಾಮದ ಸುತ್ತಲೂ ನೀರು ಆವರಿಸಿರುವುದರಿಂದ ಬೋಟ್ ಮೂಲಕ ನಡುಗಡ್ಡೆಗೆ ಹೋಗುವಂತಾಗಿದೆ. ಧರೆಪ್ಪ ನಾಟಿಕಾರ, ರವಿ ನಾಟಿಕಾರ, ಹಣಮಂತ ನಾಟಿಕಾರ, ಮುತ್ತಣ್ಣ ನಾಟಿಕಾರ, ಗುರಸಿದ್ದ ಹಿಪ್ಪರಗಿ, ರಾಮು ಅಮಾತಾ ಅವರ ಮನೆಗಳಿಗೆ ನೀರು ನುಗ್ಗಿದೆ. ಆ ಕುಟುಂಬದವರು ಇನ್ನೂ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿದ್ದಾರೆ.

‘ತಾಲ್ಲೂಕಾಡಳಿತ ಇನ್ನೂ ಕಾಳಜಿ ಕೇಂದ್ರ ತೆರೆದಿಲ್ಲ, ಜಾನುವಾರಿಗೆ ಮೇವಿನ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಇಲ್ಲಿ ಬಂದು ಮನೆ ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರವಾಗಲು ಒತ್ತಾಯಿಸುತ್ತಿದ್ದಾರೆ. ಮನೆ ಖಾಲಿ ಮಾಡಿ ನಾವು ಎಲ್ಲಿಗೆ ಹೋಗುವುದು’ ಎಂದು ರೈತ ಧರೆಪ್ಪ ನಾಟಿಕಾರ ಪ್ರಶ್ನಿಸಿದರು.

ADVERTISEMENT

ಮುತ್ತೂರಿನಲ್ಲಿ 40 ರಿಂದ 50 ಕುಟುಂಬಗಳು ವಾಸವಾಗಿವೆ. 150ಕ್ಕೂ ಹೆಚ್ಚು ಜಾನುವಾರು ಇವೆ. 30 ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಅಂದಾಜು 170 ಎಕರೆ ಜಮೀನಿದೆ. ಹಲವು ಜಮೀನುಗಳಲ್ಲಿ ನೀರು ನುಗ್ಗಿದೆ.

‘ಪ್ರತಿ ವರ್ಷ ಅಧಿಕಾರಿಗಳು ಬಂದು ಬೇರೆಡೆ ಹೋಗಲು ಹೇಳುತ್ತಾರೆ. ನಾವು ಜನ–ಜಾನುವಾರು, ಮನೆಯ ಸಾಮಗ್ರಿ ತೆಗೆದುಕೊಂಡು ಹೋಗಿ ಬರಲು ಕನಿಷ್ಠ ₹ 20 ಸಾವಿರ ಬೇಕಾಗುತ್ತದೆ. ಅದನ್ನು ಎಲ್ಲಿಂದ ತರುವುದು? ನಮಗೆ ಶಾಶ್ವತ ಪರಿಹಾರ ನೀಡಿ. ನಾವೇ ಇಲ್ಲಿಂದ ಬೇರೆ ಕಡೆ ಹೋಗುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ಹಿಪ್ಪರಗಿ ಹೇಳಿದರು.

ನೀರಿನ ಹರಿವು ಹೆಚ್ಚಳ: ಹಿಪ್ಪರಗಿ ಜಲಾಶಯದಲ್ಲಿ ಒಳ ಹರಿವು 1.81 ಲಕ್ಷ ಕ್ಯೂಸೆಕ್‌, ಹೊರಹರಿವು 1.80 ಕ್ಯೂಸೆಕ್ ಇದೆ. ನೀರಿನ ಮಟ್ಟ 523.93 ಮೀಟರ್ ಇದ್ದು, ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದ 22 ಗೇಟ್‌ಗಳನ್ನು ತೆರೆದು ಬಂದಿರುವ ಎಲ್ಲ ನೀರನ್ನು ಹರಿಬೀಡಲಾಗುತ್ತಿದೆ.

2 ಕುಟುಂಬಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಕಾಳಜಿ ಕೇಂದ್ರ ತೆರೆದಿಲ್ಲ. ನೀರಿನ ಮಟ್ಟ ಹೆಚ್ಚುತ್ತಿದೆ. ಜನರು ಸುರಕ್ಷಿತವಾಗಿ ಇರಲು ಸೂಚಿಸಲಾಗಿದೆ
ಅನೀಲ ಬಡಿಗೇರ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.