ADVERTISEMENT

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಒಪ್ಪಂದ ದರಕ್ಕೆ ಒಪ್ಪಿಸುವರೇ ನಾಯಕರು?

ಮುಳುಗಡೆಯ ಪ್ರತಿ ನೀರಾವರಿ ಎಕರೆಗೆ ₹40 ಲಕ್ಷ , ಒಣಭೂಮಿಗೆ ₹30 ಲಕ್ಷ ನಿಗದಿ

ಬಸವರಾಜ ಹವಾಲ್ದಾರ
Published 17 ಸೆಪ್ಟೆಂಬರ್ 2025, 4:17 IST
Last Updated 17 ಸೆಪ್ಟೆಂಬರ್ 2025, 4:17 IST
ಆಲಮಟ್ಟಿ ಜಲಾಶಯದ ನೋಟ
ಆಲಮಟ್ಟಿ ಜಲಾಶಯದ ನೋಟ   

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ಭೂಮಿ ಹಾಗೂ ಕಾಲುವೆಗೆ ಹೋಗುವ ಭೂಮಿಗೆ ರಾಜ್ಯ ಸರ್ಕಾರ ಹೊಸದಾಗಿ ದರ ನಿಗದಿ ಮಾಡಿದೆ. ಈ ಒಪ್ಪಂದ ದರಕ್ಕೆ ರೈತರನ್ನು ಒಪ್ಪಿಸುವ ಹೊಣೆಯನ್ನು ಜನಪ್ರತಿನಿಧಿಗಳು, ರೈತ ಹೋರಾಟಗಾರರ ಹೆಗಲಿಗೆ ಸರ್ಕಾರ ವರ್ಗಾಯಿಸಿದೆ. ಇದರಲ್ಲಿ ಅವರು ಯಶಸ್ವಿಯಾಗುವರೇ ಎಂಬುದು ಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರವು ಯುಕೆಪಿಯಡಿ ಮುಳುಗಡೆಯಾಗುವ ನೀರಾವರಿಯ ಪ್ರತಿ ಎಕರೆಗೆ ₹40 ಲಕ್ಷ, ಒಣಭೂಮಿಯ ಪ್ರತಿ ಎಕರೆಗೆ ₹30 ಲಕ್ಷ ನಿಗದಿ ಮಾಡಲಾಗಿದೆ. ಕಾಲುವೆಗೆ ಬೇಕಾಗುವ ನೀರಾವರಿಯ ಪ್ರತಿ ಎಕರೆಗೆ ₹30 ಲಕ್ಷ, ಒಣಭೂಮಿ ಪ್ರತಿ ಎಕರೆಗ ₹25 ಲಕ್ಷ ನಿಗದಿ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸೇರಿದಂತೆ ರೈತ ಹೋರಾಟಗಾರರು ನೀರಾವರಿಯ ಪ್ರತಿ ಎಕರೆಗೆ ₹50 ಲಕ್ಷ, ಒಣಭೂಮಿ ಪ್ರತಿ ಎಕರೆಗೆ ₹40 ಲಕ್ಷ ಪರಿಹಾರ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದರು. ಸರ್ಕಾರ ಹಲವಾರು ಸುತ್ತಿನ ಮಾತುಕತೆಯ ನಂತರ ಮೇಲಿನ ದರ ನಿಗದಿ ಮಾಡಿದೆ.

ADVERTISEMENT

ಮುಳುಗಡೆ ಹಾಗೂ ಕಾಲುವೆಗೆ ನೀಡುವ ಭೂಮಿಯ ಪರಿಹಾರ ದರ ಬೇರೆ, ಬೇರೆ ನಿಗದಿ ಮಾಡಿರುವುದಕ್ಕೆ ರೈತರ ಪ್ರತಿಕ್ರಿಯೆ ಇನ್ನಷ್ಟೇ ವ್ಯಕ್ತವಾಗಬೇಕಿದೆ. ಪುನರ್‌ವಸತಿಗಾಗಿ ತೆಗೆದುಕೊಳ್ಳುವ ಭೂಮಿಯ ದರದ ಬಗ್ಗೆ ತೆಗೆದುಕೊಂಡ ನಿರ್ಧಾರ ಬಹಿರಂಗವಾಗಿಲ್ಲ.

ಯುಕೆಪಿ ಮೂರನೇ ಹಂತದ ಯೋಜನೆ ಪೂರ್ಣಗೊಳ್ಳಲು 1.33 ಲಕ್ಷ ಎಕರೆ ಭೂಮಿ ಬೇಕಾಗಿದೆ. ಇದರಲ್ಲಿ 75,563 ಎಕರೆ ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣಕ್ಕಾಗಿ 51,830 ಎಕರೆ, ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್‌ವಸತಿಗಾಗಿ 6,469 ಎಕರೆ ಭೂಮಿ ಬೇಕಾಗಿದೆ.

ನಿಗದಿತ ಅವಧಿಯಲ್ಲಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದರೆ ಮಾತ್ರ ಹೆಚ್ಚಿನ ಭೂಮಿ ಸರ್ಕಾರಕ್ಕೆ ನೇರವಾಗಿ ದೊರೆಯಲಿದೆ. ವಿಳಂಬ ಮಾಡಿದರೆ, ನಿತ್ಯ ಬೆಲೆ ಹೆಚ್ಚಾಗುವುದರಿಂದ ಭವಿಷ್ಯದಲ್ಲಿ ಮತ್ತೆ ದರ ಸಮಸ್ಯೆ ಎದುರಾಗಲಿದೆ.

ಮುಳುಗಡೆಯಾಗುವ ಭೂಮಿಗೆ ಪರಿಹಾರ ನಿಗದಿ ಮಾಡಿರುವುದು ಸ್ವಾಗತಾರ್ಹ. ಪ್ರತಿ ವರ್ಷ ಶೇ10ರಷ್ಟು ಬೆಳವಣಿಗೆ ದರದಲ್ಲಿ ಹೆಚ್ಚಳವಾಗುವುದರಿಂದ ಇದೇ ಆರ್ಥಿಕ ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು
ಪ್ರಕಾಶ ಅಂತರಗೊಂಡ ಸಂಚಾಲಕ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ

ಒಂದು ಲಕ್ಷ ಕೋಟಿ ಬೇಕು!

ಯುಕೆಪಿ ಮೂರನೇ ಹಂತ ಪೂರ್ಣಗೊಳಿಸಲು ಅಂದಾಜು 1 ಲಕ್ಷ ಕೋಟಿ ಮೊತ್ತ ಬೇಕಾಗಲಿದೆ. ಈ ಹಿಂದೆ ನಿಗದಿಯಾಗಿದ್ದ ಪರಿಹಾರಕ್ಕೆ ₹87 818 ಕೋಟಿ ಬೇಕಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮವು ಮಾರ್ಚ್‌ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಲ್ಲಿ ಒಣ ಬೇಸಾಯಕ್ಕೆ ₹30 ಲಕ್ಷ ನೀರಾವರಿ ಭೂಮಿಗೆ ₹35 ಲಕ್ಷಕ್ಕೆ ಹೆಚ್ಚಿಸಿದರೆ ಅಂದಾಜು ವೆಚ್ಚ ₹96006 ಕೋಟಿಗೆ ಹೆಚ್ಚಲಿದೆ ಎಂದಿತ್ತು. ಈಗ ರಾಜ್ಯ ಸರ್ಕಾರ ಅದಕ್ಕಿಂತಲೂ ಹೆಚ್ಚಿನ ದರ ನಿಗದಿ ಮಾಡಿರುವುದರಿಂದ ವೆಚ್ಚ ಲಕ್ಷ ಕೋಟಿ ದಾಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಮಾತುಗಳನ್ನಾಡಿದ್ದಾರೆ. ₹70 ಸಾವಿರ ಕೋಟಿ ಬೇಕಾಗಬಹುದು ಎಂದಿದ್ದಾರೆ. ಆದರೆ ವಾಸ್ತವದಲ್ಲಿ ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.