ADVERTISEMENT

ಮೀಸಲಾತಿ ಹೋರಾಟದ ಹಿಂದೆ ಯತ್ನಾಳ ಕುಮ್ಮಕ್ಕು ಇಲ್ಲ: ಬಸವ ಜಯಮೃತ್ಯುಂಜಯ ಶ್ರೀ

‘ಪಾದಯಾತ್ರೆ ಕೈ ಬಿಡುವುದಾಗಿ ಹೇಳಿಲ್ಲ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 19:18 IST
Last Updated 13 ಜನವರಿ 2021, 19:18 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ಬಾಗಲಕೋಟೆ: ‘ಪಾದಯಾತ್ರೆ ಹಿಂಪಡೆಯುವುದಾಗಿ ಎಲ್ಲಿಯೂ ಹೇಳಿಲ್ಲ. ಸಚಿವ ಮುರುಗೇಶ ನಿರಾಣಿ ಬೆಂಗಳೂರಿನಲ್ಲಿ ಯಾವ ಅರ್ಥದಲ್ಲಿ ಹಾಗೆ ಹೇಳಿಕೆ ನೀಡಿದ್ದಾರೊ ಗೊತ್ತಿಲ್ಲ. ಇಟ್ಟ ಹೆಜ್ಜೆ ಯಾವುದೇ ಕಾರಣಕ್ಕೂ ಹಿಂತೆಗೆಯುವುದಿಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ಕೂಡಲಸಂಗಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿದರೆ ಮಾತ್ರ ಪಾದಯಾತ್ರೆ ಹಿಂಪಡೆಯುವೆ’ ಎಂದರು.

‘ಪಂಚಮಸಾಲಿ ಸಮಾಜದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ, ಅದರಲ್ಲೇನೂ ವಿಶೇಷವಿಲ್ಲ. ಸಮುದಾಯದ ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

ADVERTISEMENT

ಯತ್ನಾಳ ಕುಮ್ಮಕ್ಕು ಇಲ್ಲ: ‘ಪಾದಯಾತ್ರೆಯ ಹಿಂದೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕುಮ್ಮಕ್ಕು ಇದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವರು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರಲಿಲ್ಲ. ಪಾದಯಾತ್ರೆಗೆ ಪಕ್ಷಾತೀತವಾಗಿ ಸಮಾಜದ ಹಾಲಿ– ಮಾಜಿ ಶಾಸಕರ ಬೆಂಬಲ ಇದೆ. ಯತ್ನಾಳ ಅವರೇ ಗುರುವಾರ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.