ಬೀಳಗಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಕೆರೆಗಳ ಪುನಶ್ಚೇತನ ಹಾಗೂ ನೂತನ ಕೆರೆಗಳ ನಿರ್ಮಾಣ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ’ ಎಂದು ಶಾಸಕ ಜೆ.ಟಿ.ಪಾಟೀಲ ಪ್ರಶಂಸಿಸಿದರು.
ತಾಲ್ಲೂಕಿನ ಸುನಗ ಎಲ್.ಟಿ.1 ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುನಗ ಗ್ರಾಮ ಪಂಚಾಯಿತಿ, ಕೆರೆ ಅಭಿವೃದ್ಧಿ ಸಮಿತಿ, ನಮ್ಮ ಊರು, ನಮ್ಮ ಕೆರೆ ಯೋಜನೆಯ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆರೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೆರೆಗಳು ಗ್ರಾಮೀಣ ಭಾಗಗಳ ಅಮೂಲ್ಯ ಜಲಮೂಲಗಳಾಗಿವೆ. ಗ್ರಾಮಸ್ಥರು ಅವುಗಳನ್ನು ಸಂರಕ್ಷಿಸಬೇಕು. ನೀರನ್ನು ನಾವು ಗಂಗಾಮಾತೆಗೆ ಹೋಲಿಸುತ್ತಿದ್ದು, ಕೆರೆಯ ಶುಚಿತ್ವ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ತಿಳಿಸಿದರು.
‘ಮನುಷ್ಯನಿಗೆ ಧನ, ಕನಕ, ವಸ್ತ್ರ, ವೈಢೂರ್ಯಗಳಿಗಿಂತ ನೀರು, ಗಾಳಿ, ನೆಲ ಮೊದಲಾದವು ತುಂಬಾ ಮುಖ್ಯ. ಪ್ರಕೃತಿಯ ಅವಿಭಾಜ್ಯ ಅಂಗಗಳಾದ ಜಲ, ಅರಣ್ಯ, ಗಾಳಿ ಮೊದಲಾದವುಗಳನ್ನು ನಾವು ಕಾಯ್ದುಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಚನ್ನಕೇಶವ ಪ್ರಾಸ್ತಾವಿಕವಾಗಿ ಮಾತನಾಡಿ, ‘ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅವರು ದೂರ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನಸೇವೆ ಮಾಡುತ್ತಿದ್ದಾರೆ. ಅವರ ನೆರವಿನಿಂದ ಸುನಗ ಎಲ್. ಟಿ ಗ್ರಾಮದ ಕೆರೆ ಅಭಿವೃದ್ಧಿ ಹೊಂದಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದೆ’ ಎಂದು ತಿಳಿಸಿದರು.
ಬೀಳಗಿಯ ಯೋಜನಾಧಿಕಾರಿ ಸುಭ್ರಾಯ.ಕೆ ಸ್ವಾಗತಿಸಿದರು. ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಸಂದಿಮನಿ ಹಾಗೂ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮೇಟಿ ವಿತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಪವಾರ, ರೇಣುಕಾ ಲಮಾಣಿ, ಆನಂದ ಲಮಾಣಿ, ಶಾಂತಾಬಾಯಿ ಲಮಾಣಿ, ಶಾರುಬಾಯಿ ಲಮಾಣಿ, ಪಡಿಯವ್ವ ತಳವಾರ, ಪಿಡಿಒ ಮಹೇಶ ಜಗಲಿ, ಬೀಳಗಿ ತಾಲ್ಲೂಕಾ ಕೃಷಿ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.