ADVERTISEMENT

ಶಿಥಿಲ ಕಟ್ಟಡದಲ್ಲಿ ಗ್ರಂಥಾಲಯ

ಜ್ಞಾನ ದೇಗುಲಕ್ಕಿಲ್ಲ ಸ್ವಂತ ಸೂರಿನ ಭಾಗ್ಯ: ಪುಸ್ತಕ ರಕ್ಷಣೆಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:43 IST
Last Updated 25 ಅಕ್ಟೋಬರ್ 2020, 7:43 IST
ಶಿಥಿಲಗೊಂಡಿರುವ ಮಹಾಲಿಂಗಪುರದ ಗ್ರಂಥಾಲಯ ಕಟ್ಟಡ 
ಶಿಥಿಲಗೊಂಡಿರುವ ಮಹಾಲಿಂಗಪುರದ ಗ್ರಂಥಾಲಯ ಕಟ್ಟಡ    

ಮಹಾಲಿಂಗಪುರ: ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಸೂರಿನ ಭಾಗ್ಯವಿಲ್ಲ. ಇರುವ ಬಾಡಿಗೆ ಕಟ್ಟಡ ಶಿಥಿಲಗೊಂಡಿದೆ, ಹೀಗಾಗಿ ಪುಸ್ತಕ ಮತ್ತು ಪತ್ರಿಕೆಗಳನ್ನು ಜೋಪಾನವಾಗಿ ಇಡಲು ಗ್ರಂಥಪಾಲಕರು ಪರದಾಡುವಂತಾಗಿದೆ.

ಅರ್ಧ ಶತಮಾನದ ಗ್ರಂಥಾಲಯ : 52 ವರ್ಷಗಳಷ್ಟು ಹಳೆಯದಾದ ಗ್ರಂಥಾಲಯಕ್ಕೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಕಳೆದ 10 ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. 1968ರಲ್ಲಿ ಹಳೆಯ ಪುರಸಭೆ ಪಕ್ಕದ ಕಟ್ಟಡದಲ್ಲಿ ವಾಚನಾಲಯ ಆರಂಭಿಸಲಾಗಿತ್ತು. ದಶಕಗಳ ಕಾಲ ಪುರಸಭೆಯೇ ಅದರ ನಿರ್ವಹಣೆ ಮಾಡಿತ್ತು. 1978ರಲ್ಲಿ ಗ್ರಂಥಾಲಯ ಇಲಾಖೆಗೆ ಒಳಪಟ್ಟು ಸಾವಿರಾರು ಬಡ ವಿದ್ಯಾರ್ಥಿಗಳಿಗೆ, ಓದುಗರಿಗೆ ಜ್ಞಾನಾಮೃತ ನೀಡಿತ್ತು.

ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ : 2009ರಲ್ಲಿ ಹಳೆಯ ಪುರಸಭೆಯ ಆವರಣದಲ್ಲಿನ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸಿ, ಪುರಸಭೆ ನೂತನ ಕಟ್ಟಡ ನಿರ್ಮಿಸಿತ್ತು. 41 ವರ್ಷಗಳಿಂದ ಒಂದೇ ಕಟ್ಟಡದಲ್ಲಿದ್ದ ಗ್ರಂಥಾಲಯವನ್ನು ಹಳೆಯ ಸರ್ಕಾರಿ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ADVERTISEMENT

ಅಪಾಯ ಹಂತದಲ್ಲಿ ಕಟ್ಟಡ:

ಈಗ ಗ್ರಂಥಾಲಯ ಸರ್ಕಾರಿ ಆಸ್ಪತ್ರೆಯ ಹಳೆಯ ಮತ್ತು ಸಂಪೂರ್ಣ ಶಿಥಿಲಾವಸ್ಥೆ ಕಟ್ಟಡದಲ್ಲಿ ನಡೆಯುತ್ತಿದೆ.1958ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಈ ಕಟ್ಟಡ ಉದ್ಘಾಟಿಸಿದ್ದರು. ಹಳೆಯ ಕಟ್ಟಡವಾದ್ದರಿಂದ ಪ್ರತಿ ಬಾರಿಯು ಮಳೆಯಾದಾಗ ಪುಸ್ತಕಗಳ ರಕ್ಷಣೆಗಾಗಿ ಗ್ರಂಥಪಾಲಕರು ಪರದಾಡುವಂತಾಗಿದೆ. ಗ್ರಂಥಾಲಯಕ್ಕೆ ಸ್ವಂತ ಸೂರು ಕಲ್ಪಿಸಿ, ಗ್ರಂಥಾಲಯದಲ್ಲಿನ ಅಮೂಲ್ಯ ಗ್ರಂಥಗಳನ್ನು ರಕ್ಷಿಸಬೇಕು ಎಂಬುದು ಪಟ್ಟಣದ ಓದುಗರು ಆಗ್ರಹವಾಗಿದೆ.

ಗ್ರಂಥಾಲಯದಲ್ಲಿ 32 ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಎಲ್ಲವನ್ನು ಒಂದೇ ಕೋಣೆಯಲ್ಲಿ ಇಡಲಾಗಿದೆ. ಹೊಸ ಕಟ್ಟಡಕ್ಕೆ ಇಲಾಖೆ ಇಲಾಖೆ ₹20 ಲಕ್ಷ ಅನುದಾನ ನೀಡಿದೆ. 40x60 ಅಳತೆಯ ಜಾಗೆ ಸಿಕ್ಕರೆ ಕಟ್ಟಡ ನಿರ್ಮಿಸಲು ಇಲಾಖೆ ಸಿದ್ಧವಿದೆ. ಶಾಸಕರಿಗೂ ಮನವಿ ಮಾಡಲಾಗಿದೆ ಎಂದುಶಾಖಾ ಗ್ರಂಥಪಾಲಕ ಜಿ.ಎಚ್. ಪಾಟೀಲ ಹೇಳುತ್ತಾರೆ.

ಜಾಗೆ ನೀಡಲು ಒತ್ತಾಯ :

ಪುರಸಭೆಯಿಂದ ಜಾಗ ನೀಡುವ ಮೂಲಕ ಜ್ಞಾನ ದೇಗುಲದ ಉಳಿವಿಗೆ ಪ್ರಯತ್ನಿಸಬೇಕು ಎಂದು ಜೆಡಿಎಸ್ ಮುಖಂಡ ನಿಂಗಪ್ಪ ಬಾಳಿಕಾಯಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.