ಗುಳೇದಗುಡ್ಡ: ಪ್ರಸ್ತುತ ಈ ವರ್ಷ ಮುಂಗಾರು ಆರಂಭವಾಗಿದ್ದು, ಉತ್ತಮ ಮಳೆ ಆಗಿದ್ದರಿಂದ ರೈತರು ತಮ್ಮ ಹೊಲ, ಗದ್ದೆ,ಭೂಮಿ ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಅದರಂಗವಾಗಿ ತಾಲ್ಲೂಕಿನ ಹರದೊಳ್ಳಿ ಮತ್ತು ಕೋಟೆಕಲ್ ಸೇರಿದಂತೆ ಮುಂತಾದ ಗ್ರಾಮದಲ್ಲಿ ವಿಶೇಷವಾಗಿ ಕೂರಿಗೆ ಪೂಜೆ ಮಾಡಿ ಸೀರೆಯುಡಿಸಿ ಕುಪ್ಪಸ ತೊಡಿಸಿ ಸಿಂಗಾರ ಮಾಡಿದ ಕೂರಿಗೆಯನ್ನು ಸಂಭ್ರಮದಿಂದ ಬಿತ್ತನೆ ಕಾರ್ಯಕ್ಕೆ ಹೊಲಗಳಿಗೆ ಒಯ್ಯಲಾಗುತ್ತದೆ.
ರೋಹಿಣಿ ಮಳೆಗೂ ಮುಂಚೆಯೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೊಲಗಳಿಗೆ ಕೂರಿಗೆ ಪೂಜೆ ಮಾಡುವುದು ವಾಡಿಕೆ.
ಕೂರಿಗೆಗೂ ಮಡಿಲ ಶಾಸ್ತ್ರ : ಪಾರಂಪರಿಕವಾಗಿ ಬೆಳೆದು ಬಂದ ಈ ಶಾಸ್ತ್ರದ ಪ್ರಕಾರ ಬಿತ್ತಿದ ಬೀಜ ಹುಲುಸಾಗಿ ಬೆಳೆದು ಅನ್ನ ಸಂಪತ್ತು ಹೆಚ್ಚಾಗಲಿ ಎಂದು ಮಡಿಲ ಶಾಸ್ತ್ರದ ಮೂಲಕ ರೈತರು ಬಿತ್ತನೆಗೆ ಮುಂದಾಗುತ್ತಾರೆ.
ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಪ್ರದಾಯದಂತೆ ಕುರುಬ ಮನೆತನದವರು ಮೊದಲು ಕೂರಿಗೆ ಪೂಜೆ ಮಾಡುತ್ತಾರೆ. ಈಗಾಗಲೇ ಹೆಚ್ಚಿನ ಗ್ರಾಮಗಳಲ್ಲಿ ಕೂರಿಗೆ ಪೂಜೆ ಮಾಡಲಾರಂಭಿಸಿದ್ದಾರೆ.
ಹರದೊಳ್ಳಿಯ ಭೀಮನಗೌಡ ಪಾಟೀಲ, ಕೋಟೆಕಲ್‍ನ ಕಲ್ಲಪ ರಾಮಣ್ಣ ಶಿರೂರ, ಸಬ್ಬಲಹುಣಸಿಯ ಮಲ್ಲಪ್ಪ ಕುರಿ ಮನೆತನದಲ್ಲಿ ಹೊಸ ಕೂರಿಗೆಯನ್ನು ಸಿದ್ದಪಡಿಸಿ ಅದಕ್ಕೆ ಸುಣ್ಣ ಬಣ್ಣ ಹಚ್ಚಿ, ಶೆಡ್ಡಿ ಬಟ್ಟಲ ಕಟ್ಟಿರುತ್ತಾರೆ. ಅದಕ್ಕೆ ರೇಷ್ಮೆಯ ಹಸಿರು ಸೀರೆ ತೊಡಿಸಿ, ಮಾವಿನ ತೊಳಲು ಕಟ್ಟಿ, ನೈವೇದ್ಯಕ್ಕೆ ಹೋಳಿಗೆ, ನುಚ್ಚು ಮಾಡಿ ಮುತ್ತೈದೆಯರು ಹಾಗೂ ಕುಟುಂಬದವರು ಸಿಡಿ ಕಾಳನ್ನು ಬಿಡುವ ಮೂಲಕ ಪೂಜೆ ಸಲ್ಲಿಸುವ ಶಾಸ್ತ್ರ ಇದಾಗಿದೆ.
ಜೊತೆಗೆ ಐದು ಜನ ಮುತ್ತೈದೆಯರಿಗೆ ಉಡಿಯನ್ನು ತುಂಬುತ್ತಾರೆ. ನಂತರ ಎಲ್ಲರೂ ಪ್ರಸಾದ ಸ್ವೀಕರಿಸುತ್ತಾರೆ. ನಂತರ ರೈತ ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾರೆ. ಒಂದುವೇಳೆ ಭೂಮಿ ದೂರ ಇದ್ದರೆ ಬಂಡಿಯ ಮೂಲಕ ಹೊಲಕ್ಕೆ ತೆಗೆದುಕೊಂಡು ಹೋಗಿ ಬಿತ್ತನೆ ಆರಂಭಿಸುತ್ತಾರೆ.
ಆಧುನಿಕ ಯಂತ್ರೋಪಕರಣ ಬಳಸುವ ಇಂದಿನ ದಿನಗಳಲ್ಲೂ ಇಂತಹ ವಿಶಿಷ್ಟ ಪರಂಪರೆ ಇನ್ನೂ ಮುಂದುವರೆದಿರುವುದು ನಮ್ಮ ಹೆಮ್ಮೆ ಎನ್ನುತ್ತಾರೆ ಕೋಟೆಕಲ್ ಗ್ರಾಮದ ಗುಂಡಪ್ಪ ಕೋಟಿ.
ಆಧುನಿಕತೆ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಸಂಪ್ರದಾಯವನ್ನು ಬಿಡಲಾಗದು. ಆದ್ದರಿಂದ ಇಂದಿಗೂ ಕೂರಿಗೆ ಪೂಜೆ ಮಾಡಿ ಬಿತ್ತನೆ ಮಾಡಲಾಗುವುದುಭೀಮನಗೌಡ ಪಾಟೀಲರೈತ ಹರದೊಳ್ಳಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.