
ಬಾಗಲಕೋಟೆಯ ಸತ್ಯಂ ಶಿವಂ ಸುದರಂ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿ ಅಂಗವಾಗಿ ಪೂಜೆ ಸಲ್ಲಿಸಲಾಯಿತು
ಬಾಗಲಕೋಟೆ: ನಗರದ ವಿವಿಧ ಶಿವ, ಮಲ್ಲಿಕಾರ್ಜುನ, ಕೇದಾರನಾಥ, ಸೋಮೇಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ಭಾನುವಾರ ವಿಶೇಷ ಪೂಜೆ ಮಾಡಲಾಯಿತು.
ಬೆಳಿಗ್ಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕರಿಸಲಾಯಿತು. ದೇವಾಲಯಗಳ ಮುಂದೆ ಭಕ್ತರು ಸಾಲುಗಟ್ಟಿ ನಿಂತು ‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ ಎಂದು ಸ್ತುತಿಸುತ್ತಾ ಅಭಿಷೇಕ, ಮಂಗಳರಾತಿ, ಪೂಜೆ ಸಲ್ಲಿಸಿದರು.
ಸೌರಾಷ್ಟ್ರ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಶಿವಾಲಯದಲ್ಲಿ ಜನರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.
ಸತ್ಯಂ ಶಿವಂ ಸುಂದರಂ, ಕಿಲ್ಲಾದ ಕೇದಾರನಾಥ ದೇವಾಲಯ, ಎಂ.ಜಿ. ರಸ್ತೆ ಬಳಿ ಮಲ್ಲಿಕಾರ್ಜುನ ದೇವಾಲಯ, ವಿದ್ಯಾಗಿರಿ ಶಿವ ದೇವಾಲಯ, ತೆಗ್ಗಿ ಬಡಾವಣೆಯಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಆರಾಧನೆ ಜುರುಗಿತು. ಅಪಾರ ಸಂಖ್ಯೆಲ್ಲಿ ಭಕ್ತರು ಭಾಗಿಯಾಗಿದ್ದರು.
ಶಿವಾಲಯದಲ್ಲಿ ರುದ್ರಾಭಿಷೇಕ, ಸಹಸ್ವ ಬಿಲ್ವಾರ್ಚನೆ, ಅಕ್ಕನ ಬಳಗದ ಸದಸ್ಯೆಯಿಂದ ಶ್ರೀರುದ್ರ ಪಾರಾಯಣ ನೆರವೇರಿತು.
ಶಿವನಾಮ ಜಪಿಸುತ್ತಾ ಹಲವಾರು ಭಕ್ತರು ಉಪವಾಸವಿದ್ದರು. ಸಂಜೆ ದೇವರಿಗೆ ನೈವೇದ್ಯ ಅರ್ಪಿಸಿದರು. ಆನಂತರ ಉಪಾಹಾರ ಸೇವಿಸಿ ಉಪವಾಸ ಕೊನೆಗೊಳಿಸಿದರು. ಕೆಲವರು ಬೆಳಗಿನವರೆಗೆ ಜಾಗರಣೆ ಮಾಡಿದರು.
ಮಾಧವ ಸೇವಾಕೇಂದ್ರದ ವತಿಯಿಂದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗುಳೇದಗುಡ್ಡದ ಗಾಯಕ ಜ್ಞಾನೇಶ್ವರ ಬೊಂಬಲೇಕರ, ದತ್ತಾತ್ರೇಯ ಶಿಂತ್ರೆ, ಹುಚ್ಚೇಶ ಮೇಟಿ ಹಾಗೂ ಸಂಗಡಿಗರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.
108 ಶಿವಲಿಂಗಗಳ ದರ್ಶನ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಚೈತನ್ಯ ದೇವಗಳ ಶಿವಶಂಕರ ಹಾಗೂ ಶಿವಶರಣೆಯರ ಮಂಟಪ ಪ್ರದರ್ಶನ ಮತ್ತು 108 ಶಿವಲಿಂಗಗಳ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ನಗರದಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. ರಾತ್ರಿ ಹಿಂದೂಸ್ತಾನಿ ಗಾಯಕ ಪಂಡಿತ್ ಕುಮಾರ ಮರಡೂರ ಅವರಿಂದ ‘ನಾದ ವೈಭವ’ ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್‍ನ ಸಂಚಾಲಕ ಸಿದ್ಧರಾಮಯ್ಯ ಮಠಪತಿ (ಗೊರಟಾ) ಅವರಿಂದ ‘ನಾದ ಸಂಗಮ’ ಗಾಯನ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.