ಮಹಾಲಿಂಗಪುರ: ಅತ್ಯಂತ ಶುದ್ಧ ಹಾಗೂ ರುಚಿಕಟ್ಟಿಗೆ ಹೆಸರಾದ ‘ಮಹಾಲಿಂಗಪುರ ಬೆಲ್ಲ’ ರಾಸಾಯನಿಕ, ಕೃತಕ ಬೆಲ್ಲ ಹಾಗೂ ಈ ಭಾಗದಲ್ಲಿ ಸ್ಥಾಪನೆಯಾದ ಸಕ್ಕರೆ ಕಾರ್ಖಾನೆಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸಲಾರದೆ ನೇಪಥ್ಯಕ್ಕೆ ಸರಿಯುತ್ತಿದೆ.
ಮಹಾಲಿಂಗಪುರ ಸುತ್ತ–ಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದರೂ, ರೈತರು ಬೆಲ್ಲ ತಯಾರಿಸುವ ಗೋಜಿಗೆ ಹೋಗದೆ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆ ಸಮಸ್ಯೆ ಇರದೇ ನೇರವಾಗಿ ಹಣ ಬರುವುದರಿಂದ ಬೆಲ್ಲ ತಯಾರಿಕೆಗೆ ಮನಸ್ಸು ಮಾಡುತ್ತಿಲ್ಲ. ಅಲ್ಲದೆ, ಸಕ್ಕರೆ ಕಾರ್ಖಾನೆ ಸಿಬ್ಬಂದಿ ರೈತರ ಹೊಲಕ್ಕೆ ತೆರಳಿ ಕಬ್ಬನ್ನು ಪರಿಶೀಲಿಸಿ ಮುಂಗಡ ಹಣ ನೀಡುತ್ತಿರುವುದು ಸಹ ರೈತರಿಗೆ ಅನುಕೂಲವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲು ಒಂದೆರಡು ಸಕ್ಕರೆ ಕಾರ್ಖಾನೆಗಳಿದ್ದವು. ಈಗ ಅವುಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನಷ್ಟು ಕಾರ್ಖಾನೆಗಳು ತಲೆ ಎತ್ತಲಿವೆ. ಇದರಿಂದ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಿದೆಯಾದರೂ ಸಕ್ಕರೆ ಕಾರ್ಖಾನೆಗೆ ಹೆಚ್ಚು ಕಳುಹಿಸಲಾಗುತ್ತಿದೆ. ಬೆಲ್ಲ ತಯಾರಿಕೆಗೆ ಕಡಿಮೆ ಪ್ರಮಾಣದಲ್ಲಿ ಕಬ್ಬು ಹೋಗುತ್ತಿದೆ.
ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಜನಪ್ರಿಯತೆ ಗಳಿಸಿದ್ದ ‘ಮಹಾಲಿಂಗಪುರ ಬೆಲ್ಲ’ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಅಲ್ಲಲ್ಲಿ ‘ಮಹಾಲಿಂಗಪುರ ಬೆಲ್ಲದ ಚಹಾ’ ಹೆಸರಿನಲ್ಲಿ ಮಾರುಕಟ್ಟೆ ವ್ಯಾಪಿಸಿದೆಯಾದರೂ, ಅದು ಕೆಲವರಿಗೆ ಮಾತ್ರ ಸೀಮಿತವಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಾಗಿದ್ದರೆ, ಮತ್ತೊಂದೆಡೆ ಕಾರ್ಖಾನೆಗಳು ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆ ಮಾಡುತ್ತಿವೆ. ಇಥೆನಾಲ್ ಉತ್ಪಾದನೆ ಮುಂದಾಗಿರುವುದು ಬೆಲ್ಲದ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರಿದೆ.
ಕೇಸರಿ ಬೆಲ್ಲ, ಬಿಳಿ ಬೆಲ್ಲ, ರಾಸಾಯನಿಕ ಮುಕ್ತ ಬೆಲ್ಲ ಎಂದು ಮೂರು ತೆರನಾದ ಬೆಲ್ಲವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬಿಳಿ ಬೆಲ್ಲವನ್ನು ಪುಡಿಯಾಗಿಯೂ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯ ಆರಂಭದಲ್ಲಿ 30 ಕೇಜಿಯ ಪೆಂಟೆಗಳು ಮಾರುಕಟ್ಟೆಗೆ ಬರುತ್ತಿದ್ದವು. ಬಳಿಕ 10 ಕೆಜಿ, 5 ಕೆಜಿ ಪೆಂಟೆಗಳು ಬಂದಿವೆ.
ನಗರ ಪ್ರದೇಶಗಳಿಗೆ ಕಳಿಸುವ ಉದ್ದೇಶದಿಂದ ಹಾಗೂ ಬೆಲ್ಲದ ದರ ಹೆಚ್ಚಳದ ಹಿನ್ನೆಲೆಯಲ್ಲಿ ಒಂದು ಕೆಜಿ, ಅರ್ಧ ಕೆಜಿ, 250 ಗ್ರಾಂ ಪೆಂಟೆ ಸಿದ್ಧಪಡಿಸಲಾಗುತ್ತದೆ. ಬಿಳಿ ಹಾಗೂ ಕೇಸರಿ ಬೆಲ್ಲ ಗುಜರಾತ್ ರಾಜ್ಯಕ್ಕೆ, ರಾಸಾಯನಿಕ ಮುಕ್ತ ಬೆಲ್ಲವು ರಾಜ್ಯದ ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರ, ವಿಜಯಪುರ, ಇಳಕಲ್, ರೋಣ, ಗಜೆಂದ್ರಗಡ ಸೇರಿದಂತೆ ವಿವಿಧಡೆ ಕಳುಹಿಸಲಾಗುತ್ತದೆ.
ಮಹಾಲಿಂಗಪುರದ ಎಪಿಎಂಸಿ ಆವರಣದಲ್ಲಿ ಶನಿವಾರ ಹೊರತುಪಡಿಸಿ ಪ್ರತಿದಿನ ಬೆಲ್ಲದ ಟೆಂಡರ್ ನಡೆಯುತ್ತದೆ. ಬೆಲ್ಲದ ಧಾರಣೆ 100 ಕೆಜಿಗೆ ₹3,914, ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇರೆ ಧಾರಣಿ ಇದ್ದು, 100 ಕೆಜಿಗೆ 4,100 ದರ ಇದೆ. ಪಂಚಮಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಹಬ್ಬಕ್ಕೆ ತಯಾರಿಸುವ ಸಿಹಿ ತಿಂಡಿಗಳಿಗೆ ಬೆಲ್ಲವನ್ನೇ ಬಳಕೆ ಮಾಡಲಾಗುತ್ತಿದ್ದು, ಹೀಗಾಗಿ ದರ ಹೆಚ್ಚಾಗುವ ಸಾಧ್ಯತೆ ಇದೆ.
‘ಬೆಲ್ಲಕ್ಕೆ ನ್ಯಾಯಯುತ ದರ ಸಿಗಬೇಕೆಂದರೆ ಎಪಿಎಂಸಿ ಆವರಣದಲ್ಲಿಯೇ ಬೆಲ್ಲ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ಬೆಲ್ಲ ಗುಣಮಟ್ಟ ಇದ್ದರೆ ದರ ಸಿಕ್ಕೇ ಸಿಗುತ್ತದೆ. ಎಪಿಎಂಸಿ ದರ ನೋಡಿಕೊಂಡೇ ಹೊರಗಡೆ ಮಾರುಕಟ್ಟೆಯಲ್ಲಿ ಬೆಲ್ಲದ ದರ ನಿರ್ಧಾರ ಆಗುತ್ತದೆ. ಬೆಲ್ಲ ತಯಾರಿಕೆಗೆ ಸರ್ಕಾರ ರೈತರಿಗೆ ಉತ್ತೇಜನ ನೀಡಬೇಕು’ ಎನ್ನುತ್ತಾರೆ ಎಪಿಎಂಸಿ ಅಡತಿ ಅಂಗಡಿ ಮಾಲೀಕ ಚಂದ್ರಶೇಖರ ಗೊಂದಿ.
‘ಅಂದಾಜು ₹60-80 ಸಾವಿರ ಖರ್ಚು ಮಾಡಿ ಗಾಣ ಸ್ಥಾಪಿಸಿದರೂ,20 ಜನ ಕೂಲಿಕಾರರು ಬೇಕು. ನಿತ್ಯ 15 ರಿಂದ 18 ಕ್ವಿಂಟಲ್ ಬೆಲ್ಲ ತಯಾರಿಸಬಹುದು. ಕೂಲಿಕಾರರು ಸಕಾಲಕ್ಕೆ ಸಿಗುವುದಿಲ್ಲ. ಕಬ್ಬು ಕಡಿಯಲು ಹೋಗುವುದರಿಂದ ಆಲೆಮನೆಗಳಲ್ಲಿ ಕೆಲಸ ಮಾಡಲು ಕೂಲಿಕಾರರೇ ಸಿಗುವುದಿಲ್ಲ. ಹೀಗಾಗಿ, ಬೆಲ್ಲದ ಉತ್ಪಾದನೆ ಕಡಿಮೆಯಾಗಿದೆ. ಶುದ್ಧ ಬೆಲ್ಲದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ರೈತ ಗಂಗಾಧರ ಮೇಟಿ ಹೇಳಿದರು.
ಸಕ್ಕರೆ ಕಾರ್ಖಾನೆಗಳ ಸ್ಥಾಪನೆ ಹಾಗೂ ಅಧಿಕ ಸಕ್ಕರೆ ಉತ್ಪಾದನೆಯಿಂದ ಬೆಲ್ಲದ ಉತ್ಪಾದನೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಬೆಲ್ಲದ ಧಾರಣೆಯೂ ಸಮಸ್ಥಿತಿಯಲ್ಲಿದೆ.- ಬಿ.ಎಸ್.ಬಾವಿಹಾಳ ಕಾರ್ಯದರ್ಶಿ ಎಪಿಎಂಸಿ ಮಹಾಲಿಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.