ಮಹಾಲಿಂಗಪುರ: ‘ಆಗಿನ ಕಾಲದಲ್ಲಿ ರಾಕ್ಷಸರಿದ್ದಂತೆ ಈ ಕಾಲದಲ್ಲಿಯೂ ಇದ್ದಾರೆ. ಆದರೆ, ಆ ರೀತಿಯ ಸ್ವರೂಪಗಳಿಲ್ಲ, ಒಳಗಿಂದೊಳಗೆ ರಾಕ್ಷಸರಿದ್ದಾರೆ. ಆ ರಾಕ್ಷಸರನ್ನು ಸಂಹಾರ ಮಾಡುವುದು ಅಗತ್ಯ ಇದೆ’ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದಿಂದ ನವರಾತ್ರಿ ಎಂಟನೇ ದಿನವಾದ ಸೋಮವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಒಂದೊಂದು ಪ್ರದೇಶದಲ್ಲಿ ಶಕ್ತಿದೇವತೆಗಳನ್ನು ಪೂಜಿಸಲಾಗುತ್ತದೆ. ಅವರೆಲ್ಲ, ದುಷ್ಟರು ಹಾಗೂ ರಾಕ್ಷಸರನ್ನು ಸಂಹಾರ ಮಾಡಿರುವ ಇತಿಹಾಸವಿದೆ. ದುಷ್ಟರನ್ನು ಸಂಹರಿಸಲು ಶಕ್ತಿದೇವತೆಗಳ ಕೈಯಲ್ಲಿ ಶಸ್ತ್ರಗಳಿದ್ದವು. ಇಂದು ಬಾಂಬ್ ಹಾಕಿ, ಯುದ್ಧಗಳ ಮೂಲಕ ಅನಾವಶ್ಯಕವಾಗಿ ಜನರನ್ನು ಕೊಲ್ಲುವ ದುಷ್ಟರನ್ನು ಸಂಹರಿಸಬೇಕಿದೆ’ ಎಂದರು.
ಸೊಲ್ಲಾಪುರದ ಮೈಂದರಗಿಯ ಗುರುಹಿರೇಮಠದ ಅಭಿನವ ರೇವಣಸಿದ್ದ ಪಟ್ಟದೇವರು ಶ್ರೀದೇವಿ ಪುರಾಣ ಹೇಳಿದರು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಕಾಂತ ನಾಯಿಕ ಗಾಯನ ಹಾಗೂ ಹಾರ್ಮೋನಿಯಂ, ಹಣಮಂತ ಅಂಕದ ತಬಲಾ ಸಾಥ್ ನೀಡಿದರು.
ಗಾಣಿಗೇರ, ಶಿವಸಿಂಪಿ, ಬೋವಿ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಶ್ರೀಗಳನ್ನು ಸನ್ಮಾನಿಸಿದರು. ಗುತ್ತಿಗೆದಾರ ಹುಚ್ಚೇಶ ವಡ್ಡರ ದಂಪತಿಯನ್ನು ಸನ್ಮಾನಿಸಲಾಯಿತು. ಕೀರ್ತಿ ಗಣೇಶ ಮಾತನಾಡಿದರು. ಮುರಗೇಶ ಕಡ್ಲಿಮಟ್ಟಿ, ಕವಿತಾ ಕೊಣ್ಣೂರ, ಶಂಕರಗೌಡ ಪಾಟೀಲ, ಆನಂದ ಕಂಪು, ಹುಚ್ಚಪ್ಪ ಸಿಂಹಾಸನ, ಚನ್ನಪ್ಪ ಬಿಳ್ಳೂರ, ಸುರೇಶ ಗಿಂಡೆ, ದುಂಡಪ್ಪ ಅಂಬಿ ಇದ್ದರು. ಪುರಾಣದ ನಂತರ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಾಲಿಂಗಪುರದ ವಿ.ಕೆ.ಸ್ಟೈಲ್ ಡ್ಯಾನ್ಸ್ ಮತ್ತು ಫಿಟ್‍ನೆಸ್ ಆಕಾಡೆಮಿಯಿಂದ ನೃತ್ಯ ವೈಭವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.