ADVERTISEMENT

ಬಾಗಲಕೋಟೆ: ಮಹಾಲಿಂಗೇಶ್ವರ ಅದ್ದೂರಿ ರಥೋತ್ಸವ

ಮಹಾಲಿಂಗೇಶ್ವರ ಮಹಾಜಾತ್ರೆ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:46 IST
Last Updated 7 ಸೆಪ್ಟೆಂಬರ್ 2025, 7:46 IST
<div class="paragraphs"><p>ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಅಹೋರಾತ್ರಿ ರಥೋತ್ಸವ ಜರುಗಿತು</p></div>

ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಅಹೋರಾತ್ರಿ ರಥೋತ್ಸವ ಜರುಗಿತು

   

ಮಹಾಲಿಂಗಪುರ: ಪವಾಡ ಪುರುಷ ಮಹಾಲಿಂಗೇಶ್ವರ ಜಾತ್ರೆಯ ಎರಡನೇ ದಿನವಾದ ಶನಿವಾರ ರಾತ್ರಿ ಅಪಾರ ಸಂಖ್ಯೆಯ ಭಕ್ತರ ಮಧ್ಯೆ ಸಂಭ್ರಮ-ಸಡಗರದಿಂದ ರಥೋತ್ಸವ ಜರುಗಿತು.

ವಿದ್ಯುತ್‍ದೀಪ, ಬೃಹತ್ ಹೂಮಾಲೆ, ಕಬ್ಬು-ಬಾಳೆಗಿಡದಿಂದ ಅಲಂಕೃತ ರಥಕ್ಕೆ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ರಾಜೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿದ್ದ ಭಕ್ತರು ‘ಮಹಾಲಿಂಗೇಶ್ವರ ಮಹಾರಾಜಕಿ ಜೈ’ ಎಂಬ ಜಯಘೋಷಗಳೊಂದಿಗೆ ತೇರು ಸಾಗಿತು. ಕರಡಿ ಮಜಲು ಹಾಗೂ ಇತರ ವಾದ್ಯ ಮೇಳಗಳು ಸಡಗರವುಂಟು ಮಾಡಿದವು.

ADVERTISEMENT

ರಥೋತ್ಸವದ ಮುಂದೆ ಉಚ್ಚಾಯಿ, ನಂದಿಕೋಲ, ಕರಡಿ ಮಜಲು, ಶಹನಾಯಿ ಸೇರಿದಂತೆ ವಿವಿಧ ಮಂಗಳವಾದ್ಯಗಳು ರಥೋತ್ಸವದ ಮೆರಗನ್ನು ಹೆಚ್ಚಿಸಿದವು. ಭಾನುವಾರ ಬೆಳಗಿನವರೆಗೂ ಜರುಗುವ ರಥೋತ್ಸವ ಮಹಾಲಿಂಗೇಶ್ವರ ಮಠದಿಂದ ನಡುಚೌಕಿ ಮಾರ್ಗವಾಗಿ ಚನ್ನಗಿರೇಶ್ವರ ದೇವಸ್ಥಾನದತ್ತ ಹೊರಟಿತು.

ರಥೋತ್ಸ ನೋಡಲು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರು ಬಂದಿದ್ದಾರೆ.. ರಥೋತ್ಸವಕ್ಕೆ ಬೆಂಡು, ಬೆತ್ತಾಸು, ಉತ್ತತ್ತಿ ಹಾರಿಸಿ, ಕಾಯಿ-ಕರ್ಪೂರ ಅರ್ಪಣೆ ಮೂಲಕ ಪೂಜೆ ಸಲ್ಲಿಸಿದರು.

ಹರಿವಾಣ ಕಟ್ಟೆ ಲೂಟಿ: ರಥೋತ್ಸವಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಪಾದಗಟ್ಟೆಯ ಮುಂದೆ ನಿರ್ಮಿಸಲಾದ ಹರಿವಾಣ ಕಟ್ಟೆಯ ಲೂಟಿ ಕಾರ್ಯಕ್ರಮ ನಡೆಯಿತು. ನೂರಾರು ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದ ಗೋವಿನ ಜೋಳ, ಬಾಳೆಗಿಡ, ಕಬ್ಬು ಸೇರಿದಂತೆ ಹಲವು ತರಹದ ಬೆಳೆಗಳನ್ನು ತಂದು ಪಾದಗಟ್ಟೆಯ ಮುಂದಿನ ಹಂದರ ಮೇಲೆ ಹಾಕಿದ್ದರು.

ಮಹಾಲಿಂಗೇಶ್ವರ ಸ್ವಾಮೀಜಿ ಪೂಜೆ ಮಾಡಿ, ಮಂಗಳಾರತಿ ಸಲ್ಲಿಸಿದ ನಂತರ ಸಂಪ್ರದಾಯದಂತೆ ಅಲ್ಲಿದ್ದ ಕಬ್ಬು, ತೆನೆ ಇತ್ಯಾದಿಗಳನ್ನು ಅಲ್ಲಿ ಜಮಾಯಿಸಿದ ಸಾವಿರಾರು ಭಕ್ತರು, ಒಬ್ಬರ ಮೇಲೊಬ್ಬರು ಬೀಳುತ್ತ ಹರಿವಾಣ ಕಟ್ಟೆಯಲ್ಲಿನ ಕಬ್ಬು, ಜೋಳದ ದಂಟನ್ನು ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

ಇಲ್ಲಿಂದ ತೆಗೆದುಕೊಂಡು ಹೋದ ಕಬ್ಬು, ಗೋವಿನ ಜೋಳದ ದಂಟನ್ನು ಮನೆ, ಅಂಗಡಿಗಳಲ್ಲಿ ಕಟ್ಟಿ, ಮುಂದಿನ ಜಾತ್ರೆಯವರೆಗೂ ಪೂಜಿಸಲಾಗುತ್ತದೆ. ಹರಿವಾಣ ಕಟ್ಟೆಯ ಪೂಜೆಯಿಂದ ರೈತರಿಗೆ ಹೊಲದಲ್ಲಿ, ಭಕ್ತರಿಗೆ ಮನೆಯಲ್ಲಿ ಅನ್ನದ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.

ಮಹಾಲಿಂಗೇಶ್ವರರ ಕತೃ ಗದ್ದುಗೆಗೆ ಮೂರು ಹೊತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಹೋಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.