ಮಹಾಲಿಂಗಪುರ: ಪಟ್ಟಣದ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರಾ ಮಹಾ ಜಟೋತ್ಸವ ಆಯೋಜನೆಯೊಂದಿಗೆ ಮಹಾತಪಸ್ವಿ ಮಹಾಲಿಂಗೇಶ್ವರ ಜಾತ್ರೆಗೆ ಸಂಭ್ರಮದ ಚಾಲನೆ ನೀಡಲಾಯಿತು.
ಭಕ್ತೆ ಸಿದ್ದಾಯಿ ತಾಯಿಗೆ ಮಹಾಲಿಂಗೇಶ್ವರರು ತಮ್ಮ ಇರುವಿಕೆಯ ಕುರುಹಾಗಿ ನೀಡಿದ ಪವಿತ್ರ ಜಟೆಯನ್ನು ಹೂವುಗಳಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆ ಮೂಲಕ ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಗಿರೇಶ್ವರ ದೇವಸ್ಥಾನಕ್ಕೆ ತರಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಜನಪದ ಕಲಾತಂಡಗಳ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾಲಿಂಗೇಶ್ವರ ಜಾತ್ರಾ ಸಮಿತಿ ಆಶ್ರಯದಲ್ಲಿ ಚಾಲನೆ ನೀಡಲಾಯಿತು.
ಗೋವನಕೊಪ್ಪದ ಜಗ್ಗಲಗಿ, ರನ್ನಬೆಳಗಲಿಯ ಡೊಳ್ಳು ಕುಣಿತ, ಸಂಗಾನಟ್ಟಿಯ ಹಲಗಿ ಮಜಲು, ಮಲ್ಲಾಪುರದ ಕೀಲು ಕುದುರೆ ಕುಣಿತ, ಗೋವನಕೊಪ್ಪದ ಹೆಜ್ಜೆ ಮೇಳ, ಕಂಕಣವಾಡಿಯ ಗೊಂಬೆ ಕುಣಿತ, ಬೀದರದ ಲಂಬಾಣಿ ನೃತ್ಯ, ಶಿರೋಳದ ರುದ್ರ ತಾಂಡವ, ಸೋಮನಕೊಪ್ಪದ ಮಹಿಳಾ ಡೊಳ್ಳು ಕುಣಿತ ಹಾಗೂ ಸಿದ್ದಾಪುರದ ವೀರಗಾಸೆ ಪ್ರದರ್ಶನಗಳು ಮೆರವಣಿಗೆಗೆ ಮೆರುಗು ನೀಡಿದವು. ಕಂಡ್ಯಾಳ ಬಾಸಿಂಗ, ನಂದಿಕೋಲು, ಉಚ್ಚಾಯಿ ಬಂಡಿ ಗಮನಸೆಳೆದವು. ಕರಡಿ ಮೇಳದ ಕಲಾವಿದರು ಹೆಜ್ಜೆ ಹಾಕಿದರು.
ಚನ್ನಗಿರೇಶ್ವರ ದೇವಸ್ಥಾನದಲ್ಲಿ ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪವಿತ್ರ ಗಂಧೋದಕ, ಗುಗ್ಗಳ ಧೂಮದಿಂದ ಜಟೆಯನ್ನು ತೊಳೆದು ಅಭಿಷೇಕ ಮಾಡಿದರು. ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಮೊದಲ ದಿನದ ಬೆಳಗಿನ ಜಾವ ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.